ಹುಬ್ಬಳ್ಳಿ: ಬ್ಲಾಕ್ ಟ್ರೇಡಿಂಗ್ ಹಾಗೂ ಐಪಿಒದಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ, ಹೂಡಿಕೆ ಮಾಡಲು ಪ್ರೇರೇಪಿಸಿ ನಿವೃತ್ತ ದಂಪತಿಗೆ 2.39 ಕೋಟಿ ರೂ. ವಂಚಿಸಲಾಗಿದೆ. ನಗರದ ಕೇಶ್ವಾಪುರದ ನಿವಾಸಿಗಳಾದ ದಂಪತಿ ವಂಚನೆಗೆ ಒಳಗಾಗಿದ್ದು, ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿಗೆ ದಿವ್ಯ ಹಾಗೂ ದೀಪಕ್ ಎಂಬುವರು ಪರಿಚಯ ಮಾಡಿಕೊಂಡು, ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಲು ತಿಳಿಸಿದ್ದಾರೆ. ಮೊದಲು 15,000 ರೂ. ಹೂಡಿಕೆ ಮಾಡಿದಾಗ, ಉತ್ತಮ ಲಾಭ ನೀಡಿದ್ದಾರೆ. ನಂತರ ವಿವಿಧ ಹಂತದಲ್ಲಿ ಮೇ 1ರಿಂದ ಜೂನ್ 12ರ ವರೆಗಿನ ಅವಧಿಯಲ್ಲಿ ಎರಡು ಡು ಬ್ಯಾಕ್ ಖಾತೆಗಳ ಮೂಲಕ ಒಟ್ಟು 2.39 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. ಬಳಿಕ ದಂಪತಿಯ ಪುತ್ರಿ ಖಾತೆಗಳನ್ನು ಪರಿಶೀಲಿಸಿದಾಗ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಈ ಕುರಿತು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ; 1.06 ಕೋಟಿ ವಂಚನೆ: ರೈತರು ಬೆಳೆದಿದ್ದ ಬೆಳೆ ಖರೀದಿಸಿದ ವ್ಯಾಪಾರಿಯೊಬ್ಬ 1.06 ಕೋಟಿ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಧಾರವಾಡ ಹಾಗೂ ನವಲಗುಂದ ತಾಲೂಕಿನ ಫಕ್ಕೀರಗೌಡ ಪಾಟೀಲ, ಇಮಾಮ್ ಸಾಬ್ ನವಲಗುಂದ, ಈಶ್ವರ ಅಂಗಡಿ, ಚಂದ್ರಪ್ಪ ದುರ್ಗನವರ ಸೇರಿದಂತೆ 24 ರೈತರು, 2022 ರಿಂದ 2023 ರವರೆಗೆ ಧಾರವಾಡ ಎಪಿಎಂಸಿಯಲ್ಲಿ ಹಳ್ಳಕಟ್ಟಿ ಟ್ರೇಡಿಂಗ್ ಕಂಪನಿ ಮಾಲೀಕ ನಾಗರಾಜ್ ಎಂಬಾತನಿಗೆ ಬೆಳೆ ಮಾರಾಟ ಮಾಡಿದ್ದರು. ಆದರೆ, ನಾಗರಾಜ್ ಒಟ್ಟು 1,06,88,567 ರೂ. ಹಣವನ್ನು ನೀಡುವುದಾಗಿ ನಂಬಿಸಿ, ಕಂಪನಿಯನ್ನು ಬೇರೆಯವರಿಗೆ ಮಾರಾಟ ಮಾಡಿ ಪರಾರಿಯಾಗಿದ್ದಾನೆ ಎಂದು ದೂರು ನೀಡಲಾಗಿದೆ. ಈ ಸಂಬಂಧ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.