ನವಲಗುಂದ: ಲಿಂಗಾಯತ, ದಲಿತ ಸೇರಿ ಎಲ್ಲ ಜಾತಿಯವರ ಹಣೆಯ ಮೇಲೆ ವಿಭೂತಿ ಇರುತ್ತಿತ್ತು. ಈಗ ಆ ಜಾಗದಲ್ಲಿ ಉದ್ದನೆಯ ಕುಂಕುಮ ಬರುತ್ತಿದೆ’ ಎಂದು ಫಕೀರ ದಿಂಗಾಲೇಶ್ವರ ಶ್ರೀ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ನಡೆದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮೊದಲು ಎದ್ದ ಕೂಡಲೇ ಶರಣು ಶರಣಾರ್ಥಿ ಎಂದು ಹೇಳುತ್ತಿದ್ದರು. ಆದರೆ ಈಗ ಹರಿ ಓಂ, ಜೈ ಶ್ರೀರಾಮ್ ಎಂದು ಹೇಳುತ್ತಿದ್ದಾರೆ. ಎಲ್ಲ ಜನಾಂಗದವರಿಗೆ ನ್ಯಾಯ ಒದಗಿಸಿದ ಬಸವಣ್ಣ ಎಲ್ಲರ ಮನೆಯಲ್ಲಿ ಇರಬೇಕಾಗಿತ್ತು. ಆದರೆ ಇವತ್ತು ನಮ್ಮ ಸಂಸ್ಕೃತಿ ನಾಶವಾಗುವ, ಸಿದ್ಧಾಂತವಿಲ್ಲದ ಫೋಟೊಗಳು ಪ್ರವೇಶ ಮಾಡಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಹುಬ್ಬಳ್ಳಿಯ ಉಣಕಲ್ ಕೆರೆಗೆ ಚನ್ನಬಸವ ಸಾಗರ ಎಂದು ಫಲಕ ಹಾಕಬೇಕಿತ್ತು, ಹೈಕೋರ್ಟ್ ಆದೇಶ ಇದ್ದರೂ ಹಾಕಿಲ್ಲ. ಮಧ್ಯದಲ್ಲಿ ಚನ್ನಬಸವಣ್ಣನವರ ಮೂರ್ತಿ ಇಡಬೇಕಿತ್ತು, ಆದರೆ ಯಾರದು ನಿಲ್ಲಿಸಿದ್ದಾರೆ? ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಟ್ಟಿದ್ದಾರೆ. ಆದರೆ ಅಲ್ಲಿ ಮೂರ್ತಿ ಯಾರದು ನಿಲ್ಲಿಸಿದ್ದಾರೆ ಎಂದು ಯೋಚನೆ ಮಾಡಿ ಮತ ಚಲಾಯಿಸ ಬೇಕಾಗಿದೆ’ ಎಂದು ಕರೆ ನೀಡಿದರು.
ಲಿಂಗಾಯತರು ಸೇರಿದಂತೆ ಅನೇಕ ವರ್ಗದ ಭಕ್ತರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಜೋಶಿ ಬದಲು ಬೇರೆ ಅಭ್ಯರ್ಥಿ ಹಾಕುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೆ. ಅವರು ಅಭ್ಯರ್ಥಿ ಬದಲಾಯಿಸದ ಕಾರಣ ಜನರಲ್ಲಿ ಜಾಗೃತಿ ಮೂಡಿಸಿ, ಬದಲಾವಣೆ ಮಾಡುವಂತೆ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿರುದ್ಧ ಪ್ರಚಾರ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ ದ್ವೇಷ ರಾಜಕಾರಣ ಕೊನೆಗೊಳಿಸಲು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿ’ ಎಂದು ಕರೆ ನೀಡಿದರು.