Ad imageAd image

ಹುಬ್ಬಳ್ಳಿಯಲ್ಲಿ ತಾಸಿನ ಮಳೆ; ಜನಜೀವನ ಅಸ್ತವ್ಯಸ್ತ

Hubballi Dhwani
ಹುಬ್ಬಳ್ಳಿಯಲ್ಲಿ ತಾಸಿನ ಮಳೆ;  ಜನಜೀವನ ಅಸ್ತವ್ಯಸ್ತ
WhatsApp Group Join Now
Telegram Group Join Now

ಮಳೆಗೆ ಹುಬ್ಬಳ್ಳಿ ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ:ಗುಡುಗು-ಸಿಡಿಲಿನ ಅಬ್ಬರ, ರಭಸದ ಗಾಳಿ ಸಮೇತ ಹುಬ್ಬಳ್ಳಿಯಲ್ಲಿ ಶನಿವಾರ ಒಂದು ತಾಸಿನ ಧಾರಾಕಾರ ಮಳೆ ಸುರಿಯಿತು.

ಸರಿಯಾಗಿ ಮಧ್ಯಾಹ್ನ ೩.೩೦ರಿಂದ ಬಲವಾದ ಗಾಳಿಯೊಂದಿಗೆ ಮಳೆ ಸುರಿಯಿತು. ನಾಲಾ ತುಂಬಿ ಹರಿದ ಪರಿಣಾಮ ನ್ಯೂ ಕಾಟನ್ ಮಾರ್ಕೆಟ್, ಕಮರಿಪೇಟೆ, ಈಶ್ವರನಗರ ಸೇರಿದಂತೆ ರಸ್ತೆ ಜಲಾವೃತಗೊಂಡಿತು. ಗುಡುಗು -ಸಿಡಿಲಿನ ಅಬ್ಬರಕ್ಕೆ ನಗರದ ಜನತೆ ಬೆಚ್ಚಿ ಬಿದ್ದರು.
ಗಾಳಿಯ ರಭಸಕ್ಕೆ ನಗರದ ವಿವಿಧೆಡೆ ಮರದ ರೆಂಬೆ ಕೊಂಬೆಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿವೆ. ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್ ಮಾರ್ಗದಲ್ಲಿ ನೀರು ನಿಂತಿದ್ದವು.
ಅಶೋಕನಗರ ರೈಲ್ವೆ ಬ್ರಿಡ್ಜ್, ಲ್ಯಾಮಿಂಗ್ಟರ್ ರಸ್ತೆ, ಆನಂದ ನಗರ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು, ಪಾದಚಾರಿಗಳು ಪರದಾಡಿದರು.
ಬಿರು ಬೇಸಿಗೆಯಿಂದ ತತ್ತರಿಸಿ ಹೋಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಮಧ್ಯಾಹ್ನದವರೆಗೂ ಬಿರು ಬೇಸಿಗೆಯಲ್ಲಿ ಬೆಂದಿದ್ದ ಹುಬ್ಬಳ್ಳಿಯ ಮಂದಿಗೆ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ. ನಗರದ ಕೆಲವಡೆ ಬಿರು ಗಾಳಿಯಿಂದಾಗಿ ಪ್ಲೆಕ್ಸ್ ಮತ್ತು ಬ್ಯಾನರ್ಗಳು ಗಾಳಿಗೆ ಹಾರಿ ಹೋಗುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.
ಕೆಲ ಕೆಳ ಪ್ರದೇಶಗಳಲ್ಲಿನ ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ನಿವಾಸಿಗರು ಸಮಸ್ಯೆಗೆ ಸಿಲುಕಿದ್ದು, ಮನೆಯಲ್ಲಿ ನುಗ್ಗಿದ ನೀರನ್ನು ಹೊರಗೆ ಚೆಲ್ಲುವಲ್ಲಿ ತೊಡಗಿದ್ದಾರೆ. ರಸ್ತೆ ಅಭಿವೃದ್ಧಿ ಪ್ರದೇಶಗಳಲ್ಲಂತೂ ವಾಹನ ಸವಾರರು ಸರ್ಕಸ್ ಮಾಡುವಂತಾಗಿದ್ದು, ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದ್ದು, ಮುಂಗಾರು ಮಳೆಯಿಂದಾಗಿ ರೈತರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಆಲಿಕಲ್ಲು ಸಹಿತ ಭಾರಿ ಮಳೆ: ಕಳೆದ ಹದಿನೈದು ದಿನಗಳಿಂದ ೪೦, ೪೧, ೪೨ ಡಿಗ್ರಿ ಬಿಸಿಲಿನ ತಾಪವನ್ನು ಅನುಭವಿಸಿದ್ದ ಜನರಿಗೆ ಮಳೆರಾಯನ ಅಬ್ಬರದಿಂದ ಖುಷಿಯಾಗಿದೆ. ಆದರೆ, ಗಾಳಿ ಸಹಿತ ಮಳೆಯಿಂದ ಹುಬ್ಬಳ್ಳಿಯ ಜನರು ಆತಂಕಗೊಂಡಗೊಂಡರು.
ಹುಬ್ಬಳ್ಳಿಯ ಮಾಧವಪುರದಲ್ಲಿ ಟಿಸಿವೊಂದು ಸುಟ್ಟು ಹೋಗಿದೆ. ಕೊಪ್ಪಿಕರ್ ರಸ್ತೆ, ಅರವಿಂದ ನಗರ, ಆನಂದ ನಗರ ಮುಖ್ಯ ರಸ್ತೆ, ಹೊಸೂರ ವೃತ್ತ, ಸಿದ್ಧಾರೂಢಮಠ, ಹಳೆ ಇನ್ಕಂ ಟ್ಯಾಕ್ಸ್ ಜನತಾ ಬಜಾರ್, ದುರ್ಗದ್ ಬೈಲ್ ಮುಂತಾದ ಕಡೆಗಳಲ್ಲಿ ನೀರಿನಲ್ಲಿ ಕೆಲಕಾಲ ವಾಹನ ನಿಂತಿವೆ. ಕೆಲ ಬಡಾವಣೆಗಳಲ್ಲಿ ಮರಗಳು ರಸ್ತೆಗೆ ಬಿದ್ದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಗೋಪನಕೊಪ್ಪ, ಇಸ್ಲಾಂಪುರ, ಗಿರಣಿ ಚಾಳ, ಹಳೆ ಮೇದಾರ ಓಣಿ, ಕಾರವಾರ ರಸ್ತೆ ಹಳೆ ಹುಬ್ಬಳ್ಳಿಯ ಕೆಲ ಪ್ರದೇಶಗಳಲ್ಲಿ ಮರ ಬಿದ್ದು ಕೆಲ ಮನೆಗಳು ಭಾಗಶಃ ಜಖಂಗೊಂಡಿವೆ. ಜತೆಗೆ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಾರುಕಟ್ಟೆ ಪ್ರದೇಶದ ಇಕ್ಕೆಲಗಳಲ್ಲಿ ನಿಲ್ಲಿಸಿದ್ದ ಬೈಕ್ಗಳು ನೀರಿನಲ್ಲಿ ಮುಳುಗಿದ್ದವು. ಹಳೆ ಹುಬ್ಬಳ್ಳಿ ಗಾರ್ಡನ್ ಪೇಟ, ಅಂಬೇಡ್ಕರ್ ಕಾಲೊನಿ ಸೇರಿದಂತೆ ಹಲವು ಕಡೆಗಳಲ್ಲಿ ಮನೆಗಳಲ್ಲಿ ನೀರು ನುಗ್ಗಿದೆ.

WhatsApp Group Join Now
Telegram Group Join Now
Share This Article
error: Content is protected !!