ನೇಹಾ ಹತ್ಯೆಯನ್ನು ಮರೆಸಿದ ಪ್ರಜ್ವಲ್ ಪ್ರಕರಣ
ಇನ್ನೂಳಿದ ಆರೋಪಿಗಳ ಬಂಧನ ಯಾವಾಗ ?
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠಳನ್ನು ಮುಸ್ಲಿಂ ಯುವಕ ಚುಚ್ಚಿ ಕೊಂದ ದೃಶ್ಯಗಳು ವೈರಲ್ ಆದಾಗ ರಾಜ್ಯಾದ್ಯಂತ ಸಹಜವಾಗಿಯೇ ಆಕ್ರೋಶ ವ್ಯಕ್ತವಾಗಿತ್ತು. ನಮ್ಮ ಮನೆ ಮಗಳು ಹತ್ಯೆಯಾದಳು ಎಂಬಂತಹ ಮನೋಭಾವ ಮೂಡಿತ್ತು. ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದವು. ನ್ಯಾಯಕ್ಕಾಗಿ ಆಗ್ರಹಿಸಿದ್ದವು.
ನೇಹಾಳ ತಂದೆ ಪಾಲಿಕೆ ಸದಸ್ಯ ನಿರಂಜನ ಹಿರೇಮಠರು ಕೂಡ ತಮ್ಮ ಮಗಳಿಗಾದ ಅನ್ಯಾಯ ಮತ್ಯಾರಿಗೂ ಆಗಬಾರದು ಎಂದು ಸರ್ಕಾರವನ್ನು ಆಗ್ರಹಿಸಿದ್ದರು. ಇದಲ್ಲದೇ ಪ್ರಕರಣದಲ್ಲಿ ಇನ್ನೂಳಿದವರ ಬಂಧನಕ್ಕೆ ಒತ್ತಾಯಿಸಿದ್ದರು. ಇದರ ಮಧ್ಯೆ ಯಾವಾಗ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಅಶ್ಲೀಲ ದೃಶ್ಯಗಳು ಬಿಡುಗಡೆಗೊಂಡವೋ ನೇಹಾ ಪ್ರಕರಣದ ತೀವ್ರತೆ ಕಡಿಮೆಯಾಗುತ್ತ ಬಂದಿತು. ಸರ್ಕಾರ ಚುನಾವಣೆ ಆರೋಪ ಪ್ರತ್ಯಾರೋಪದಲ್ಲಿ ತೊಡಗಿತು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇನ್ನೂಳಿದವರ ಬಂಧನದ ಕೂಗು ದಿನೇ ದಿನೇ ಕ್ಷಿಣಿಸುತ್ತ ಬಂದಿತು.
ಅಶ್ಲೀಲ ದೃಶ್ಯಗಳ ಚರ್ಚೆ ಉತ್ತರ ಕರ್ನಾಟಕದಲ್ಲಿ ನೇಹಾ ಪ್ರಕರಣದ ತೀವ್ರತೆ ಮಾತ್ರ ಕಡಿಮೆ ಮಾಡಿದ್ದು ನಿಜ. ಎಲ್ಲಾ ರಾಜಕೀಯ ಪಾರ್ಟಿಗಳಿಗೂ ಸಂಚಲನ ಸೃಷ್ಟಿಸುವ ಪ್ರಕರಣಗಳು ವೋಟ್ ಬ್ಯಾಂಕ್ ಅನ್ನು ಕೂತಲ್ಲಿಯೇ ತಲುಪಬಲ್ಲ ಅಸ್ತ್ರಗಳು. ಈ ಕಡೆ ಚುನಾವಣೆ ಮುಗಿದ ಮೇಲೆ ಆ ಕಡೆಯ ಪ್ರಕರಣಗಳಲ್ಲೂ ಆಸಕ್ತಿ ಕಡಿಮೆ ಆಗುತ್ತದೆ ಎನ್ನುವ ಮಾತು ಸತ್ಯವಾಗಿದೆ. ಸದ್ಯ ನೇಹಾಳ ಹತ್ಯೆಯ ನ್ಯಾಯವನ್ನು ಕೇವಲ ಫ್ಲೆಕ್ಸ್ ಬ್ಯಾನರ್ಗಳು ಮಾತ್ರ ಕೇಳುತ್ತಿವೆ. ದಿನ ಕಳೆದಂತೆ ಆರೋಪಿಗಳು ತಪ್ಪಿಸಿಕೊಳ್ಳಲು ಹಾಗೂ ತಂತ್ರ ರೂಪಿಸಲು ಸಹಕಾರಿಯಾಗಲಿದೆ. ಇನ್ನೂಳಿದವರ ಬಂಧನ ಯಾವಾಗ ಎಂದು ನೇಹಾಳ ತಂದೆ ನಿರಂಜನ ಹಿರೇಮಠ ಸೇರಿದಂತೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ.