ಅಂಜಲಿ ಕುಟುಂಬದ ನೋವಿಗೆ ಹೆಗಲು ನೀಡಿದ ಪಾಲಿಕೆ ಸದಸ್ಯ
ನಿರಂಜನ ಹಿರೇಮಠ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಹುಬ್ಬಳ್ಳಿ: ನೋವಿನಲ್ಲೂ ಮತ್ತೊಬ್ಬರಿಗೂ ಧೈರ್ಯ ಹೇಳುವುದು ಬೆನ್ನಿಗೆ ನಿಲ್ಲುವುದು ಸುಲಭದ ಮಾತಲ್ಲ. ತನ್ನ ನೋವಿನಲ್ಲೂ ಮತ್ತೊಂದು ಕಟುಂಬಕ್ಕೆ ಧೈರ್ಯ ಹೇಳುವ ಕಾರ್ಯವನ್ನು ನಿರಂಜನ ಹಿರೇಮಠವರು ಮಾಡಿದ್ದಾರೆ. ಮಗಳು ನೇಹಾಳನ್ನು ಕಳೆದುಕೊಂಡು ತಿಂಗಳು ಗತಿಸುವದರಲ್ಲೇ ಹತ್ಯೆಗೀಡಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಸರ್ಕಾರವನ್ನು ಮನೆ ಬಾಗಿಲಿಗೆ ಕರೆಯಿಸಿ ಧೈರ್ಯ ಹೇಳಿಸುವ ಕೆಲಸ ಮಾಡಿದ್ದಾರೆ. ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಅವರಿಗೆ 1 ಲಕ್ಷ ರೂ. ಧನ ಸಹಾಯ ಮಾಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಇದಲ್ಲದೇ ಅಂಬಿಗೇರ ಕುಟುಂಬವಿರುವ ಮನೆಯನ್ನು ಖಾಲಿ ಮಾಡಲು ಮಾಲೀಕರು ಸೂಚಿಸಿದಾಗ ಅವರಿಗೆ ತಿಳಿವಳಿಕೆ ನೀಡಿ ಆ ಕುಟುಂಬ ಅಲ್ಲೇ ನೆಲೆಸುವಂತೆ ಮಾಡಿದ್ದಾರೆ. ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳ ಮಠದಿಂದ ಆ ಮನೆಯ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಭರಿಸುವ ಭರವಸೆ ಸಿಗುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಆ ಕುಟುಂಬಕ್ಕೆ ಶಾಶ್ವತ ಸೂರು ಹಾಗೂ ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರೂ ಇದೀಗ ಗೃಹ ಸಚಿವರು ಆ ಕುಟುಂಬ ಮನೆ ಹಾಗೂ ಒಬ್ಬರಿಗೆ ಸರ್ಕಾರಿ ನೌಕರಿಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಎಲೆ ಮರೆಯ ಕಾಯಿಯಂತೆ ವಾರ್ಡ್ನ ಒಂದು ಕುಟುಂಬ ಸಂಕಷ್ಟದಲ್ಲಿದ್ದಾಗ ಸ್ಪಂದಿಸುವ ಕೆಲಸ ಮಾಡಿದ್ದಾರೆ. ನಿರಂಜನ ಹಿರೇಮಠರ ಕಾರ್ಯಕ್ಕೆ ಅವಳಿನಗರದ ಜನತೆಯಷ್ಟೇ ಅಲ್ಲದೇ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿಜವಾದ ಜನಪ್ರತಿನಿಧಿಯ ಜವಾಬ್ದಾರಿಯನ್ನು ನಿಭಾಯಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.