ಬಮ್ಮಿಗಟ್ಟಿಯಲ್ಲಿ ಸಂಭ್ರಮದ ವಿಜಯದಶಮಿ
ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಶನಿವಾರ ಆಯುಧ ಪೂಜೆ, ವಿಜಯದಶಮಿಯನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ಜನ ಮನೆಯಲ್ಲಿರುವ ವಸ್ತುಗಳು, ವಾಹನಗಳು, ಆಯುಧಗಳನ್ನು ಅಲಂಕರಿಸಿ, ಪೂಜೆ ಸಲ್ಲಿಸಿದರು. ಮಳಿಗೆಗಳಿಗೂ ಅಲಂಕರಿಸಿ ಪೂಜಿಸಲಾಯಿತು. ಗ್ರಾಮದಲ್ಲಿ ಹಬ್ಬದ ಸಂಭ್ರಮ ಮೇರೆ ಮೀರಿತ್ತು. ಎಲ್ಲೆಡೆ ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಎಲ್ಲರ ಮನೆ ಮುಂದೆ ರಂಗೋಲಿ ಕಂಗೊಳಿಸಿತು.
ಪಬ್ಲಿಕ್ ಶಾಲೆಯಲ್ಲಿರುವ ಬನ್ನಿ ಗಿಡದ ಸುತ್ತಲೂ ಪಲ್ಲಕ್ಕಿಯಲ್ಲಿ ದೇವರ ಮೆರವಣಿಗೆ ಮಾಡಲಾಯಿತು.
ದ್ಯಾಮವ್ವದೇವಿ, ಹನುಮಾನ, ಅಡವಿ ಸಿದ್ಧೇಶ್ವರ, ಈಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ವಿವಿಧ ಕಡೆಗಳಿಂದ ಸಾವಿರಾರು ಜನ ಬಂದಿದ್ದರು. ಮೆರವಣಿಗೆ ನಂತರ ಬನ್ನಿ ಮುಡಿದು, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪೂಜೆ ಮುಗಿದ ಬಳಿಕ ಪುನಃ ಎಲ್ಲ ದೇವರ ಮೂರ್ತಿಗಳು ಆಯಾ ದೇವಸ್ಥಾನ ತಲುಪಿದವು. ಯುವಕರು ಭಕ್ತಿಭಾವದಿಂದ ಪಲ್ಲಕ್ಕಿ ಹೊತ್ತು ಹೆಜ್ಜೆ ಹಾಕಿದರು. ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ, ದೇವರಿಗೆ ಜಯಘೋಷ ಹಾಕಿದರು. ಈ ಸಂದರ್ಭದಲ್ಲಿ ಬಮ್ಮಿಗಟ್ಟಿ ಗ್ರಾಮದ ಗುರು ಹಿರಿಯರು ಇದ್ದರು.