ಛಾಯಾಗ್ರಾಹಕರ ಮೇಲೆ ಹಲ್ಲೆ; ಕ್ರಮಕ್ಕೆ ಆಗ್ರಹ
ಧಾರವಾಡ: ಬೆಂಗಳೂರಿನ ಶಿವಾಜಿನಗರದ ಕಲ್ಯಾಣ ಮಂಟಪ ವೊಂದರಲ್ಲಿ ಕಾರ್ಯನಿರತ ಛಾಯಾ ಗ್ರಾಹಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಧಾರವಾಡ ಫೋಟೊ ಮತ್ತು ವಿಡಿಯೊಗ್ರಾಫರ್ಸ್ ಸಂಘದವರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಹಲ್ಲೆ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಘೋಷಣೆ ಕೂಗಿದರು.
ಫೋಟೊ ಹಾಗೂ ವಿಡಿಯೊಗ್ರಾಫರ್‌ಗಳ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾ ಸಲಕರಣೆಗಳನ್ನು ನಾಶ ಮಾಡಿರುವುದು ಅಮಾನವೀಯ ಕೃತ್ಯ. ಈ ಘಟನೆ ಛಾಯಾಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಛಾಯಾಗ್ರಾಹಕರಿಗೆ ರಕ್ಷಣೆ ನೀಡಬೇಕು. ಕಾರ್ಯನಿಮಿತ್ತ ರಾತ್ರಿ ವೇಳೆ ಓಡಾಡುವ ಛಾಯಾಗ್ರಾಹಕರಿಗೆ ಪೊಲೀಸರು ಅನುಮತಿ ಪತ್ರ ನೀಡಬೇಕು ಎಂದು ಮನವಿ ಮಾಡಿದರು.
ಕಲ್ಯಾಣಮಂಟಪಗಳಲ್ಲಿ ಛಾಯಾ ಗ್ರಾಹಕರ ಕ್ಯಾಮೆರಾ ಪರಿಕರಗಳ ಕಳುವಾಗಿರುವ, ಛಾಯಾಗ್ರಾಹಕರನ್ನು ತಡೆದು ಕ್ಯಾಮೆರಾ ಪರಿಕರಗಳನ್ನು ಕಿತ್ತುಕೊಂಡು ಹೋಗಿರುವ ಅನೇಕ ಪ್ರಕರಣಗಳು ನಡೆದಿವೆ. ಕಲ್ಯಾಣ ಮಂಟಪಗಳಲ್ಲಿ ಕಣ್ಗಾವಲಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಾಹುಲ್ ದತ್ತಪ್ರಸಾದ, ರವಿ ಯಾಲಕ್ಕಿಶೆಟ್ಟರ್, ಬಾಸ್ಕೋ ಸೊಲೊಮನ್, ಉಮೇಶ ಚಿಕ್ಕೋಡಿ, ನಂದೀಶ್ವರ ಹೆಗಡೆ, ಅಮೃತ ಕಾಟಿಗಾರ, ಮೋಹನ, ಮುರಳಿ ಇದ್ದರು.