Ad imageAd image

ಕಿಮ್ಸ್‌‌ನಲ್ಲಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ: ಡಾ.ಎಸ್.ಎಫ್.ಕಮ್ಮಾರ

Hubballi Dhwani
ಕಿಮ್ಸ್‌‌ನಲ್ಲಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ: ಡಾ.ಎಸ್.ಎಫ್.ಕಮ್ಮಾರ
WhatsApp Group Join Now
Telegram Group Join Now

ಕಿಮ್ಸ್‌‌ನಲ್ಲಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ: ಡಾ.ಎಸ್.ಎಫ್.ಕಮ್ಮಾರ

ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಕಿಮ್ಸ್ ಆಸ್ಪತ್ರೆ ನೀಡುತ್ತಿದೆ ಎಂದು ಕಿಮ್ಸ್‌‌ನ ನಿರ್ದೇಶಕರಾದ ಡಾ.ಎಸ್.ಎಫ್.ಕಮ್ಮಾರ‌ ಹೇಳಿದರು.

ಇಂದು ಕಿಮ್ಸ್‌‌ನ ನೃಪತುಂಗ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ದಿನ 1626 ಜನ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರಾಸರಿ 201 ರಷ್ಟು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರದಿಂದ ಗುರುವಾರದವರೆಗೆ ರೋಗಿಗಳ ಸಂಖ್ಯೆ ಹೆಚ್ಚಳವಾಗಿರುತ್ತದೆ. ಶುಕ್ರವಾರದಿಂದ ರವಿವಾರದವರೆಗೆ ರೋಗಿಗಳ ಪ್ರಮಾಣ ಕಡಿಮೆಯಾಗಿರುತ್ತದೆ. ಕಳೆದ ಎರಡು ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಎಂಆರ್‌‌ಐ ಸ್ಕ್ಯಾನಿಂಗ್‌‌ಗೆ ಕೂಡ ಉತ್ತಮ ಪತ್ರಿಕ್ರಿಯೆ ವ್ಯಕ್ತವಾಗಿದೆ‌ ಎಂದರು.

ಜೀವಾಮೃತ ತಾಯಿ ಹಾಲು ಭಂಡಾರ ಕೇಂದ್ರವನ್ನು ಸಹ ತೆರೆಯಲಾಗಿದೆ. ನಗದು ರಹಿತ ಚಿಕಿತ್ಸೆಗೆ ರೈಲ್ವೆ ಇಲಾಖೆ, ಪೊಲೀಸ್ ಇಲಾಖೆ, ಹೆಸ್ಕಾಂ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಕೊಳ್ಳಲಾಗಿದೆ‌. ಬಂಕಾಪುರದಿಂದ ತೇಗೂರವರೆಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ 48 ಗಂಟೆಯೊಳಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿದೆ‌‌. ಬ್ರೇಕಿ ಥೆರಪಿಯನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು. ಇದರಿಂದ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲಿದೆ. ಟೆಲಿ ಐಸಿಯು ಹಬ್‌‌ಗೆ ಉತ್ತಮ ಪತ್ರಿಕ್ರಿಯೆ ದೊರೆತಿದೆ. ಹೊಸದಾಗಿ ನವಜಾತ ಶಿಶು ವಿಭಾಗ (ನಿಯೋ ನ್ಯಾಟೋಲಜಿ) ತೆರೆಯಲಾಗುವುದು. ವಿದ್ಯಾರ್ಥಿಗಳ ವಸತಿ ನಿಲಯಗಳ ನವೀಕರಣ, ಕ್ರೀಡಾಂಗಣ ಅಭಿವೃದ್ಧಿ, 8 ಓಟಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. 60 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ವಿವಿಧ ಕಾಮಗಾರಿಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬರುವ ಅಕ್ಟೋಬರ್ ತಿಂಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಿಮ್ಸ್ ಪ್ರಾಚಾರ್ಯರಾದ ಡಾ.ಈಶ್ವರ ಹೊಸಮನಿ ಮಾತನಾಡಿ, ಜೀವ ಸಾಧಕ‌ ಸಂಘದಲ್ಲಿ ಮೊದಲೇ ಅಂಗಾಂಗ ದಾನಗಳನ್ನು ಯಾವ ಆಸ್ಪತ್ರೆಗೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿರುವುದಿಲ್ಲ. ಕಿಮ್ಸ್‌‌‌ನಲ್ಲಿ ಕಣ್ಣು ಮತ್ತು ಕಿಡ್ನಿ ಕಸಿ ಮಾಡಲು ಅವಕಾಶವಿದೆ. ಕಿಮ್ಸ್ ನಲ್ಲಿ ಯಕೃತ್ತು ಕಸಿ ಮಾಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ರಾಜಶೇಖರ ದ್ಯಾಬೇರಿ, ಡಾ. ಸಿದ್ದೇಶ್ವರ ಕಡಕೋಳ, ಡಾ.ರಾಜಶಂಕರ, ಡಾ.ಶಿವಾನಂದ, ಡಾ.ಲಕ್ಷ್ಮೀಕಾಂತ್ ಸೇರಿದಂತೆ ಇತರ ವಿಭಾಗಗಳ ಮುಖ್ಯಸ್ಥರು, ವೈದ್ಯರು, ಸಿಬ್ಬಂದಿ ಹಾಜರಿದ್ದರು.

WhatsApp Group Join Now
Telegram Group Join Now
Share This Article
error: Content is protected !!