ಕರ್ನಾಟಕದಲ್ಲಿ ’ಎನ್ಕೌಂಟರ್ ಲಾ’ ಜಾರಿಗೆ ತನ್ನಿ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಖಂಡಿಸಿ ಶನಿವಾರ ನಗರದಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸೇರಿದ್ದ ಸಾರ್ವಜನಿಕರು ಕರ್ನಾಟಕದಲ್ಲಿ ’ಎನ್ಕೌಂಟರ್ ಲಾ’ ಜಾರಿಗೆ ತರಲು ಒತ್ತಾಯಿಸಿದರು. ಇಬ್ಬರು ಯುವತಿಯ ಕೊಲೆಯಿಂದ ಸಮಾಜ ಮತ್ತು ಕಾನೂನು ತಲೆ ತಗ್ಗಿಸುವಂತಾಗಿದೆ ಎಂದು ಕಿಡಿ ಕಾರಿದ ಪ್ರತಿಭಟನಾಕಾರರು ಸೂಕ್ತ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ವೇದಿಕೆಯಲ್ಲಿ ಶ್ರೀ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ವಿಶೇಷ ನ್ಯಾಯಾಲಯ ರಚಿಸಿ ಎರಡು ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು. ಪರಿಹಾರ ಸಿಗದಿದ್ದರೆ ನಾವೆಲ್ಲರೂ ಸೇರಿ ಮುಖ್ಯಮಂತ್ರಿಗಳ ಬಳಿ ಹೋಗುತ್ತೇವೆ ಎಂದು ಎಚ್ಚರಿಸಿದರು.
ಹುಬ್ಬಳ್ಳಿ- ಧಾರವಾಡದಲ್ಲಿ ಕೆಲವರಿಗೆ ಕಾನೂನಿನ ಬಗ್ಗೆ ಭಯವಿಲ್ಲ. ಮಹಿಳೆಯರಿಗೆ ರಕ್ಷಣೆ ನೀಡದ ಪೊಲೀಸ್ ಇಲಾಖೆ ಏತಕ್ಕಾಗಿ ಬೇಕು ಎಂದು ಪ್ರಶ್ನಿಸಿದರು.
ಪೊಲೀಸರು ಅನ್ಯಾಯವನ್ನು ಹತ್ತಿಕ್ಕುವ ಬದಲು ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕಡೆ ಗಮನ ಹರಿಸುತ್ತಿಲ್ಲ. ಈ ಹಿಂದೆ ನೇಹಾ ಹತ್ಯೆಯಾದಾಗ ರಾಜ್ಯ ಸರ್ಕಾರ ಕಾನೂನು ತರಲಿಲ್ಲ. ಅಂಜಲಿ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡುವ ಜೊತೆಗೆ ಮನೆ ನೀಡಬೇಕು. ಸರ್ಕಾರಿ ನೌಕರಿ ಕೊಡಬೇಕು ಎಂದರು.
ಮೃತ ಅಂಜಲಿಗೆ ಯುವಕ ಮೊದಲೇ ಕೊಲೆ ಬೆದರಿಕೆ ಹಾಕಿದ್ದ. ಆಗ ಆತ ನೇಹಾಳಂತೆ ಕೊಲೆ ಮಾಡುವುದಾಗಿ ಹೇಳಿದ್ದ. ಈ ಬಗ್ಗೆ ಆ ಕುಟುಂಬಸ್ಥರು ದೂರು ನೀಡಿದಾಗ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಕ್ಕೆ ಈ ಕೃತ್ಯ ನಡೆದುಹೋಗಿದೆ ಎಂದು ಪೊಲೀಸರ ನಡೆಗೆ ಅಸಮಾಧಾನ ಹೊರ ಹಾಕಿದರು.
ಎನ್ಕೌಂಟರ್ ಕಾನೂನು ಜಾರಿ ಮಾಡಿ
ದೇಶದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಜಾರಿಗೆ ತಂದಿರುವ ಕಾನೂನನ್ನು ಜಾರಿಗೆ ತರಬೇಕು. ಯೋಗಿಯಂತೆ ಎನ್ಕೌಂಟರ್ ಕಾನೂನು ಕರ್ನಾಟಕದಲ್ಲಿ ಜಾರಿ ಆಗಬೇಕು. ಆಗಲೇ ಮುಂದೆ ಇಂತಹ ಘಟನೆಗಳು ಆಗಲು ತಪ್ಪಿಸಬಹುದ ಎಂದು ಹಾವೇರಿಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಆಗ್ರಹಿಸಿದರು..
ಸಮಾಜದಲ್ಲಿರುವ ಕೆಲ ಕ್ರೂರ ಮನಸ್ಸುಗಳಿಗೆ ಈ ನೆಲದ ಕಾನೂನಿನ ಭಯ ಇಲ್ಲ. ಹೀಗಾಗಿ ನಿಧಾನಗತಿಯ ಕಾನೂನು ಬೇಡ. ಶೀಘ್ರವೇ ಸರ್ಕಾರ ಎನ್ಕೌಂಟರ್ ಕಾನೂನು ಜಾರಿಗೆ ತರಬೇಕು ಎಂದು ಶ್ರೀಗಳು ಆಗ್ರಹಿಸಿದರು.