ಮಳೆ ಹಾನಿ; ಕ್ರಮ ಕೈಗೊಳ್ಳಲು ಸೂಚನೆ
ಹುಬ್ಬಳ್ಳಿ: ನಗರದ 36ನೇ ವಾರ್ಡ್‌ಗೆ ಮಂಗಳವಾರ ಭೇಟಿ ನೀಡಿದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು, ಮಳೆಯಿಂದ ಉಂಟಾದ ಹಾನಿ ವೀಕ್ಷಿಸಿದರು.
‘ಉಣಕಲ್ ಸಂತೆ ಬಯಲು ಬಳಿ ಇರುವ ಚರಂಡಿ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಿದ್ದರಿಂದ ಕೊಳಚೆ ನೀರು ಕಟ್ಟಿಕೊಂಡಿದ್ದು, ನೀರು ಮುಂದೆ ಹರಿದುಹೋಗದೆ ದುರ್ವಾಸನೆ ಹರಡುತ್ತಿದೆ’ ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು.
ಕೆಲವೆಡೆ ಒಳಚರಂಡಿ ಚೇಂಬರ್ ತುಂಬಿ, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವ ಬಗ್ಗೆ ಆಯುಕ್ತರ ಗಮನಕ್ಕೆ ತಂದರು. ಬಳಿಕ, ಶ್ರೀನಗರದಲ್ಲಿ ಮಳೆ ನೀರು ನುಗ್ಗಿದ್ದರಿಂದ ಮನೆ, ಶಾಲೆ ಆವರಣ ಹಾನಿ ಯಾಗಿದ್ದನ್ನು ವೀಕ್ಷಿಸಿದರು. ನಾಲೆಯಲ್ಲಿ ವಿದ್ಯುತ್ ಕಂಬಗಳಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದರು.
ಮಳೆಯಿಂದ ಉಂಟಾದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ ಪಾಲಿಕೆ ಆಯುಕ್ತರು, ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ಇನ್ನಿತರ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಡಾ. ಆಚಾರ್ಯ, ಮಲ್ಲಿಕಾರ್ಜುನ ಮೆಣಸಿಕಾಯಿ, ಜ್ಯೋತಿ ದೇಸಾಯಿ, ರಾಜೇಂದ್ರ ದೊಡ್ಡವಾಡ, ಪ್ರಕಾಶ ಸಗರ ಸೇರಿದಂತೆ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.