ಕಮರಿಪೇಟೆಯಲ್ಲಿ ಹೆಚ್ಚಾದ ಹಂದಿಗಳ ಹಾವಳಿ !
ಕಮರಿಪೇಟೆಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಜನರು ತೊಂದರೆ ಪಡುವಂತಾಗಿದೆ. ಸಮಸ್ಯೆ ಕಣ್ಣೇದುರಿಗೆ ಕಾಣುತ್ತಿದ್ದರೂ ಪಾಲಿಕೆ ಸದಸ್ಯರು ತಮಗೂ ಇದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ರಸ್ತೆಯ ಮೇಲೆ ಹಂದಿಗಳು ದಿಢೀರನೆ ಅಡ್ಡ ಬಂದಾಗ ಕಕ್ಕಾಬಿಕ್ಕಿಯಾಗುವ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ.
ಹಂದಿಗಳಿಂದಾಗಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿ ಎದುರಾಗಿದ್ದು, ಈ ಬಗ್ಗೆ ಪಾಲಿಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಂದಿ ಸಾಕಾಣಿಕೆದಾರರಿಗೆ ಎಚ್ಚರಿಕೆ ನೀಡಬೇಕು ಎಂಬುದು ಪಟ್ಟಣ ನಿವಾಸಿಗಳ ಆಗ್ರಹವಾಗಿದೆ.
ನಾಡ ಹಂದಿಗಳ ಮಾಂಸಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಒಂದು ಕೆ.ಜಿ. ಮಾಂಸಕ್ಕೆ ೨೫೦-೩೦೦ ದರ ಸಿಗುತ್ತಿರುವುದರಿಂದ ಕೆಲವರು ಇದನ್ನೇ ದೊಡ್ಡ ಉದ್ಯಮವನ್ನಾಗಿಸಿಕೊಂಡಿದ್ದಾರೆ. ಮತ್ತೊಂದೆಡೆ ಹೊರ ರಾಜ್ಯವಾದ ಗೋವಾದಲ್ಲಿ ಹಂದಿ ಮಾಂಸಕ್ಕೆ ಅಕ ಬೇಡಿಕೆ ಬಂದಾಗ ಇಲ್ಲಿಯ ನಾಡ ಹಂದಿಗಳನ್ನು ರಫ್ತು ಮಾಡುವ ದೊಡ್ಡ ಜಾಲವೂ ಇದರ ಹಿಂದೆ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಹಂದಿಗಳಿಂದಾಗಿ ಕಮರಿಪೇಟೆ ಗಬ್ಬೇದ್ದು ನಾರುತ್ತಿದೆ. ಚೆಲ್ಲಿದ ಕಸವೆಲ್ಲ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದು, ಓಣಿಗಳೆಲ್ಲ ದುರ್ನಾತ ಬೀರುವಂತಾಗಿವೆ. ಮನೆಯ ಮುಂದೆ ನಿತ್ಯ ಗಲೀಜು ಕಾಣಿಸಿಕೊಳ್ಳುತ್ತಿದ್ದು, ಜನರು ಬೇಸತ್ತುಕೊಳ್ಳುವಂತಾಗಿದೆ.
ತುಳಜಾಭವಾನಿ ದೇವಸ್ಥಾನಕ್ಕೆ ಬರುವ ಮಾರ್ಗದಲ್ಲೇ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಳ್ಳುವ ಹಂದಿಗಳ ದಂಡಿನಿಂದಾಗಿ ಭಕ್ತರು ಸಂಕಷ್ಟು ಅನುಭವಿಸುವಂತಾಗಿದೆ.
ನಾಡ ಹಂದಿಗಳು ಕೊಳಚೆ ಪ್ರದೇಶದಲ್ಲಿಯೇ ಹೆಚ್ಚಾಗಿರುತ್ತದೆ. ಆದರೆ, ಇದೀಗ ನಗರದಲ್ಲೂ ಇವುಗಳ ಪ್ರಮಾಣ ಹೆಚ್ಚಾಗಿದೆ. ಅನುಮತಿ ಪಡೆಯದೇ ಬೇಕಾಬಿಟ್ಟಿಯಾಗಿ ಹೊರಗಿನಿಂದ ಮರಿ ತಂದು ಬಿಟ್ಟು, ಅದು ದಷ್ಟಪುಷ್ಟವಾದ ಮೇಲೆ ಪುನಃ ಹಿಡಿದುಕೊಂಡು ಹೋಗುತ್ತಾರೆ. ಜನಸಮಾನ್ಯರಿಗೆ ತೊಂದರೆಯಾಗದಂತೆ ಸಾಕಾಣಿಕೆ ಮಾಡಬೇಕು. ನಾಡಹಂದಿ ಸಾಕಾಣಿಕೆ ಮಾಡುವವರಿಗೆ ಪಾಲಿಕೆ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಬೇಕು ಎಂದು ಕಮರಿಪೇಟೆ ನಿವಾಸಿಗಳು ಆಗ್ರಹಿಸಿದ್ದಾರೆ.