ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ ಮೇಯರ್, ಉಪಮೇಯರ್ ಪಟ್ಟ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮುಖ್ಯಸ್ಥರ ಹುದ್ದೆಗೆ ಶನಿವಾರ ಚುನಾವಣೆ ನಡೆದು, 23ನೇ ಮೇಯರ್ ಆಗಿ ಬಿಜೆಪಿಯ ರಾಮಣ್ಣ ಬಡಿಗೇರ ಹಾಗೂ ಉಪ ಮೇಯರ್ ಆಗಿ ದುರ್ಗಮ್ಮ ಶಶಿಕಾಂತ ಬಿಜವಾಡ ಚುನಾಯಿತರಾದರು. ಬಹುಮತ ಇರುವ ಬಿಜೆಪಿ ಸುಸೂತ್ರವಾಗಿ ಅಧಿಕಾರವನ್ನು ಹಿಡಿದುಕೊಂಡಿತು. ಈ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಪಾಲಿಕೆ ಸಭಾಭವನದಲ್ಲಿ ಶಾನಿವಾರ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸಮ್ಮುಖದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಕಾಂಗ್ರೆಸ್ ಹಾಗೂ ಮುಸ್ಲೀಂ ಲೀಗ್ ನ ಅಭ್ಯರ್ಥಿಗಳನ್ನು ಮಣಿಸಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 30ನೇ ವಾರ್ಡಿನ ಸದಸ್ಯ ಬಡಿಗೇರ 11ಮತಗಳ ಅಂತರದಿಂದ ಮಹಾಪೌರರಾಗಿ ಆಯ್ಕೆಯಾದರು. ರಾಮಣ್ಣ ಪರ 47 ಮತ ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಯಲಿಗಾರ 36, ಮುಸ್ಲೀಂ ಲೀಗ್ ನ ಹುಸೇನಬಿ ಮೂರು ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಉಪಮೇಯರ್ ಚುನಾವಣೆಯಲ್ಲಿ 69ನೇ ವಾರ್ಡಿನ ಸದಸ್ಯೆ ದುರ್ಗಮ್ಮ ಬಿಜವಾಡ ಸಹ 47 ಮತ ಪಡೆದು ಚುನಾಯಿತರಾದರೆ, ಕಾಂಗ್ರೆಸ್‌ನ ಮಂಗಳಮ್ಮ ಹಿರೇಮನಿಗೆ 36 ಮತಗಳು ಬಂದವು.ಎರಡೂ ಪ್ರಕ್ರಿಯೆಯಲ್ಲಿ ಮೂವರು ತಟಸ್ಥರಾದರೆ, ನಾಲ್ವರು ಗೈರಾಗಿದ್ದು ಕಂಡು ಬಂದಿತು.
ಕಳೆದ ಬಾರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿದ್ದರು. ಇದಾದ ನಂತರ ಪಕ್ಷಕ್ಕೆ ಮರಳಿದ್ದರು. ಇದರಿಂದ ಕೆಲ ಸದಸ್ಯರು ಜಗದೀಶ್ ಶೆಟ್ಟರ್ ಜತೆ ಗುರುತಿಸಿಕೊಂಡು ಪಕ್ಷಕ್ಕೆ ವಾಪಾಸಾಗಿದ್ದರು. ಇದಾದ ಬಳಿಕ ಪಾಲಿಕೆಯ ಮೇಯರ್ ಚುನಾವಣೆಗೆ ಮತದಾನ ಇದ್ದುದರಿಂದ ಕುತೂಹಲವಿತ್ತು. ಆದರೂ ಬಹುಮತವಿದ್ದ ಬಿಜೆಪಿ ಅಧಿಕಾರ ಸ್ಥಾಪಿಸುವುದು ಖಚಿತವಾಗಿತ್ತು. ಬಿಜೆಪಿ ಹಿರಿಯ ನಾಯಕರೂ ಮುತುವರ್ಜಿ ವಹಿಸಿದ್ದರು. ಪಕ್ಷದ ನಾಯಕರ ನಿರೀಕ್ಷೆಯಂತೆಯೇ ಬಿಜೆಪಿ ಅಧಿಕಾರ ಹಿಡಿಯುವ ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿಯೇ ನಡೆಯಿತು.