ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸೀರುಂಡೆ ರಘು ನಾಯಕ, ರಕ್ಷಾ, ರೂಹಿ ನಾಯಕಿಯರಾಗಿ ನಟಿಸಿರುವ ಚಿತ್ರ “ರಣಾಕ್ಷ”. ದೇವರು, ದೆವ್ವದ ನಡುವಿನ ಸಂಘರ್ಷದ ಸುತ್ತ ನಡೆಯೋ ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕೆ.ರಾಘವ ಅವರು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇದೇ 27ರಂದು ರಣಾಕ್ಷ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಕೆವಿಆರ್. ಪಿಕ್ಚರ್ಸ್ ಮೂಲಕ ಹೆಚ್.ಎಸ್. ರಾಮು, ಶೋಭಾ ಶಿವಾಜಿರಾವ್ , ಉಮಾಮಹೇಶ್ವರ ಸೇರಿ ನಿರ್ಮಿಸಿದ್ದಾರೆ. ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಹಳ್ಳಿ ಸೊಗಡಿನಲ್ಲಿ ಫ್ಯಾಮಿಲಿ, ಹಾರರ್, ಥ್ರಿಲ್ಲರ್ ಕಥಾನಕ ಈ ಚಿತ್ರದಲ್ಲಿದೆ. ವಿಶಾಲ್ ಆಲಾಪ್ ಅವರ ಸಂಗೀತ, ದೀಪಕ್‌ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ,
ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಕರ್ನಾಟಕದ ಹಲವಾರು ಸುಂದರ ಲೊಕೇಶನ್‌ಗಳಲ್ಲಿ ರಣಾಕ್ಷ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ೩ ಸಾಹಸ ದೃಶ್ಯಗಳಿವೆ.
ನಿರ್ದೇಶಕ ಕೆ.ರಾಘವ ಮಾತನಾಡುತ್ತ ಈ ಹಿಂದೆ ಮರೆಯದೆ ಕ್ಷಮಿಸು ಚಿತ್ರ ನಿರ್ದೇಶಿಸಿದ್ದೆ. ನನ್ನ ನಿರ್ದೇಶನದ ಎರಡನೇ ಚಿತ್ರವಿದು. ನಿರ್ಮಾಪಕರಿಗೆ ಈ ಚಿತ್ರದ ಒಂದುಲೈನ್ ಕಥೆ ಹೇಳಿದಾಗ ಇಷ್ಟಪಟ್ಟು ಒಪ್ಪಿದರು. “ರಣಾಕ್ಷ” ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಫ್ಯಾಮಿಲಿ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಚಿತ್ರದಲ್ಲಿದೆ. ದೇವರು, ದೆವ್ವ ಎರಡರ ನಡುವಿನ ಸಂಘರ್ಷವೇ ರಣಾಕ್ಷ ಚಿತ್ರದ ಕಥಾಹಂದರ. ಯಾವುದೇ ಮಂತ್ರ, ತಂತ್ರ, ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು, ಅದು ಹೇಗೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ರಘು ನನಗೆ ಬಹಳ ವರ್ಷಗಳ ಗೆಳೆಯ, ನಿನಗೆ ಹೀರೋ ಮಾಡ್ತೇನೆ ಅಂದಾಗ ಕಾಮಿಡಿ ಮಾಡಬೇಡಿ ಅಣ್ಣಾ ಅಂದರು. ತುಂಬಾ ಶ್ರಮವಹಿಸಿ ಒಂದು ವಿಭಿನ್ನ ಚಿತ್ರವನ್ನು ನಿಮ್ಮ ಮುಂದೆ ತಂದಿದ್ದೇವೆ ಎಂದು ಹೇಳಿದರು.
ನಟ ರಘು ಸೀರುಂಡೆ ಮಾತನಾಡುತ್ತಾ ನಾನು ಕೂಡ ಮಾಧ್ಯಮದಲ್ಲಿ ಕೆಲಸ ಮಾಡಿದವನು, ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದು, ಇದೇ ಮೊದಲಬಾರಿಗೆ ನಾಯಕನ ಪಾತ್ರ ಮಾಡಿದ್ದೇನೆ. ಊರಲ್ಲಿ 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ಊರಲ್ಲಿ ನಡೆಯುವ ಘಟನೆಗಳಿಗೂ ನನಗೂ ಏನು ಸಂಬಂಧ ಎನ್ನುವುದು ಕೊನೆಯಲ್ಲಿ ರಿವೀಲ್ ಆಗುತ್ತೆ ಎಂದು ಹೇಳಿದರು. ಚಿತ್ರದ ನಾಯಕಿ ರಕ್ಷಾ ಮಾತನಾಡುತ್ತಾ ನಾನು ಮುಗ್ಧ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ, ನನ್ನ ಮೊದಲ ಚಿತ್ರವಿದು ಎಂದರು.