ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್ ಇನ್ನೂ ಸಲೀಸು
ಆರಂಭವಾಗಲಿದೆ ಸ್ಪೋಕನ್ ಇಂಗ್ಲಿಷ್ ಕ್ಲಾಸ್
ಕಬ್ಬಿಣದ ಕಡಲೆಯಾಗಿರುವ ಇಂಗ್ಲಿಷ್ ಭಾಷೆಯನ್ನು ಬೆಣ್ಣೆಯಂತೆ ನುಣುಪಾಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅರ್ಥಾತ್
ಸರ್ಕಾರಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಪರಿಣತರನ್ನಾಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸ್ಪೋಕನ್ ಇಂಗ್ಲಿಷ್’ ತರಗತಿ ಪರಿಚಯಿಸಲು ಹೊರಟಿದೆ.
ಸರ್ಕಾರಿ, ಗ್ರಾಮೀಣ ವಿದ್ಯಾರ್ಥಿಗಳು ಎಷ್ಟೇ ಚುರುಕಾಗಿದ್ದರೂ ಇಂಗ್ಲಿಷ್ ಮಾತನಾಡಲು ಅಂಜಿಕೆ ಇದೆ. ವಿಜ್ಞಾನ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ಆಳವಾದ ಅಧ್ಯಯನಕ್ಕೆ ಇಂಗ್ಲಿಷ್ ಅವಶ್ಯಕತೆ ಇರುವುದನ್ನು ಮನಗಂಡು ‘ಸ್ಪೋಕನ್ ಇಂಗ್ಲಿಷ್’ ಕಲಿಸಲು ಇಲಾಖೆ ಒತ್ತು ನೀಡಿದೆ.
ಇಂಗ್ಲಿಷ್‌ನಲ್ಲಿ ಮಾತನಾಡುವುದು, ಸಂಭಾಷಣೆ ನಡೆಸುವುದು, ಹೇಳುವುದು, ಪರಿಸ್ಥಿತಿಯನ್ನು ಇಂಗ್ಲಿಷ್ ನಲ್ಲಿ ಸಹಪಾಠಿಗಳಿಗೆ ವಿವರಿಸುವುದೂ ಸೇರಿ ದಿನನಿತ್ಯ ಇಂಗ್ಲಿಷ್ ಮಾತನಾಡುತ್ತಲೇ ಆ ಭಾಷೆಯನ್ನು ಸುಲಭವಾಗಿ ಮನದಟ್ಟು ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದ ಪ್ರಾಥಮಿಕ, ಪ್ರೌಢಶಾಲಾಮಕ್ಕಳಿಗೆ ಗುಣಾತ್ಮಕ ಮತ್ತು ಸೃಜನಾತ್ಮಕ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಶೈಕ್ಷಣಿಕ ಮಾರ್ಗಸೂಚಿ 2024-25ಪ್ರಕಟಿಸಿದೆ.
‘ಹೌ ಟು ಮೇಕ್ ಇಂಗ್ಲಿಷ್ ಈಸಿ’ ಎಂಬ ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಲು ಶಾಲಾ ಶಿಕ್ಷಕರಿಗೆ ನಿರ್ದೇಶನ ನೀಡಿದೆ. •
500 ಶಾಲೆಗಳಲ್ಲಿ ಶುರು ಪ್ರಸ್ತುತ ರಾಜ್ಯದ 2,403 ದ್ವಿಭಾಷಾ ಮಾಧ್ಯಮ ಶಾಲೆಗಳಲ್ಲಿ ಹಾಗೂ 283 ಕೆಪಿಎಸ್ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲಾಗುತ್ತಿದೆ.
2024-25ನೇ ಸಾಲಿನಲ್ಲಿ 2 ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷಿಸಿದೆ. ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಅರ್ಹತೆ ಹೊಂದಿರುವ ಶಾಲೆಗಳಿಂದ ಅರ್ಜಿ ಆಹ್ವಾನಿಸಿದ್ದು, ಕನಿಷ್ಠ 500 ಶಾಲೆಗಳಲ್ಲಿ ಮೊದಲ ಹಂತದಲ್ಲಿ ಆರಂಭಿಸುವ ಮುನ್ಸೂಚನೆ ಇದೆ. ಈ ಎಲ್ಲ ಅಂಶಗಳು ಸರ್ಕಾರಿ ಶಾಲೆ ಮಕ್ಕಳಲ್ಲಿ ಇಂಗ್ಲಿಷ್ ಕಲಿಸುವ ಪ್ರಕ್ರಿಯೆಯ ಪೂರಕವಾಗಿದೆ.
ತರಗತಿಗಳಲ್ಲಿ ಏನಿರಲಿದೆ?
• ವಿದ್ಯಾರ್ಥಿಗಳ ತಂಡ ರಚಿಸಿ ಶಾಲೆಯ ಸಂದರ್ಶನಾರ್ಥಿಗಳಿಗೆ ಶಾಲೆಯ ಕುರಿತು ಸಮಗ್ರ ವಾಗಿ ಆಂಗ್ಲ ಭಾಷೆಯಲ್ಲಿ ಪರಿಚಯಿಸುವುದು
• ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಂದಲೇ ಇಂಗ್ಲಿಷ್‌ನಲ್ಲಿ ನಿರೂಪಣೆ ಮಾಡಿಸುವುದು, ಇಂಗ್ಲಿಷ್‌ನಲ್ಲಿ ನಿರ್ವಹಣೆ ಮಾಡುವುದು ಹೇಗೆ ಎಂದು ತಿಳಿಸಿಕೊಡುವುದು
• ಶನಿವಾರದ 40 ನಿಮಿಷದ ಒಂದು ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ ಮಾತ್ರ ಎಲ್ಲ ವಿದ್ಯಾರ್ಥಿಗಳು ತಮ್ಮ ಅನುಭವ ಹೇಳಿಕೊಳ್ಳುವ ಮೂಲಕ ಇಂಗ್ಲಿಷ್ ಮಾತನಾಡುವುದನ್ನು ಕಲಿಸುವುದು.
• ಎಲ್‌ಕೆಜಿಯಿಂದ ನಲಿ-ಕಲಿ ತರಗತಿಗಳಿಗೆ ವಿವಿಧ ರೀತಿಯ ಚಾರ್ಟ್/ಪ್ಲೆಕ್ಸ್‌ಗಳನ್ನು ರಚಿಸುವುದು. ಮಾನವನ ಶರೀರದ ಭಾಗಗಳು, ಹಣ್ಣು- ತರಕಾರಿಗಳು, ಬಣ್ಣಗಳು, ವಾಹನಗಳು ಸೇರಿ ಇತರೆ ಚಿತ್ರ/ಭಾಗಗಳನ್ನು ಗುರುತಿಸಿ ದಾಖಲಿಸುವುದು..