ಶುಶ್ರೂಷಕರ ಕಾರ್ಯ ಶ್ಲಾಘನೀಯ
ಧಾರವಾಡ ಶ್ರೀಯಾ ಕಾಲೇಜಿನಲ್ಲಿ ಭಾರತೀಯ ವೈದ್ಯಕೀಯ ಸಂಘದ ಧಾರವಾಡ ಶಾಖೆ ಮತ್ತು ಶ್ರೀಯಾ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ ಶನಿವಾರ ವಿಶ್ವ ಶುಶ್ರೂಷಕರ ದಿನ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಆಸ್ಪತ್ರೆಗಳ ಐವರು ಶುಶ್ರೂಷಕರನ್ನು ಸನ್ಮಾನಿಸಲಾಯಿತು
ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷ ಡಾ. ಸತೀಶ್ ಇರಕಲ್ ಮಾತನಾಡಿ, ‘ಸ್ವಹಿತಾಸಕ್ತಿ ಬದಿಗಿರಿಸಿ ರೋಗಿಗಳ ಆರೋಗ್ಯದ ಕಾಳಜಿ ವಹಿಸುವ ಶುಶ್ರೂಷಕರ ವೃತ್ತಿ ಶ್ಲಾಘನೀಯ ವಾದುದು’ ಎಂದರು.
‘ಶುಶ್ರೂಷಕರು ರೋಗಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಮಾನಸಿಕ ವಾಗಿ ಧೈರ್ಯ ತುಂಬುತ್ತಾರೆ’ ಎಂದು ತಿಳಿಸಿದರು.
ಡಾ. ಶ್ರೀಧರ ದಂಡಪ್ಪನವರ ಮಾತನಾಡಿ, ‘ಯಾವುದೇ ಆಸ್ಪತ್ರೆ ಉತ್ತಮ ಸೇವೆ ನೀಡಲು ಶುಶ್ರೂಷಕರ ಕೊಡುಗೆ ಅಪಾರ’ ಎಂದು ಹೇಳಿದರು.
ಶ್ರೀಯಾ ಕಾಲೇಜಿನ ಅಧ್ಯಕ್ಷ ವೈ.ಎನ್. ಇರಕಲ್, ಡಾ. ಕಿರಣ್ ಕುಲಕರ್ಣಿ, ಡಾ. ವಾಣಿ ಇರಕಲ್, ಶ್ರೀಯಾ ಕಾಲೇಜಿನ ಪ್ರಾಚಾರ್ಯ ರೋಡಾ ಜೇಸುರಾಜ್, ಡಿಮ್ಹಾನ್ಸ್ ಶುಶ್ರೂಷಾಧಿಕಾರಿ ಡೆಲಿಮಾ ಪಿ. ಇದ್ದರು.