ಕುಂದಗೋಳ ; ತಾಲ್ಲೂಕಿನ ಸಂಶಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗೆ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು.
ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಸರತಿ ಸಾಲಿನಲ್ಲಿ ನಿಂತು ಬೀಜ ಪಡೆಯುವಂತೆ ಸೂಚಿಸಿದರು.
‘ಹೆಸರು ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಗುರುವಾರ 36 ಕ್ವಿಂಟಲ್ ಹೆಸರು ಬೀಜ ಮಾರಾಟವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಶೇಂಗಾ ಬೀಜವನ್ನು ಸಹ ಖರೀದಿಸಿದ್ದಾರೆ’ ಎಂದು ಕೇಂದ್ರದ ಸಿಬ್ಬಂದಿ ತಿಳಿಸಿದರು.
‘ಕಳೆದ ಎರಡ್ಮೂರು ದಿನಗಳಿಂದ ಉತ್ತಮ ಮಳೆ ಸುರಿದಿದ್ದು, ಬಿತ್ತನೆ ಮಾಡಲು ಉತ್ತಮ ಹದ ಇದೆ. ಹೆಚ್ಚಿನ ಕೌಂಟರ್ ತೆರೆದು ಬೀಜ ವಿತರಣೆ ಮಾಡಬೇಕು’ ಎಂದು ರೈತರು ಒತ್ತಾಯಿಸಿದರು.
‘ಕೇಂದ್ರದಲ್ಲಿ ಹೆಸರು ಬೀಜ ಇನ್ನೂ 52 ಕ್ವಿಂಟಲ್ ಸಂಗ್ರಹವಿದೆ. ಬೀಜದ ಕೊರತೆಯಿಲ್ಲ. ರೈತರು ಸರತಿ ಸಾಲಿನಲ್ಲಿ ನಿಂತು ಬೀಜ ಖರೀದಿ ಮಾಡಬೇಕು’ ಎಂದು ಸಹಾಯಕ ಕೃಷಿ ಅಧಿಕಾರಿ ಮಂಜುಳಾ ಸೊರಗೊಂಡ ತಿಳಿಸಿದರು.