ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಶೇ 100ರಷ್ಟು ಮತದಾನ ಆಗುವಂತೆ ಮಾಡಲು ಜಿಲ್ಲಾಡಳಿತ ಆಕರ್ಷಕ ಮತಗಟ್ಟೆ ಸ್ಥಾಪನೆ ಮಾಡಿದೆ.
63 ವಿಶೇಷ ಮತಗಟ್ಟೆ ಸ್ಥಾಪಿಸಿ ಮತದಾರರನ್ನು ಸೆಳೆಯಲು ಮುಂದಾಗಿದೆ.
ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ–ಧಾರವಾಡ ಪೂರ್ವ, ಹುಬ್ಬಳ್ಳಿ– ಧಾರವಾಡ ಪಶ್ಚಿಮ, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಹಾಗೂ ಕಲಘಟಗಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಸಖಿ ಮತಗಟ್ಟೆ ಸೇರಿ ಒಟ್ಟು 35 ಸಖಿ ಮತಗಟ್ಟೆಗಳು ಇವೆ.
ಇವುಗಳ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಅಂಗವಿಕಲರ ಮತಗಟ್ಟೆ, ಯುವ ಮತಗಟ್ಟೆ, ಥೀಮ್ ಮತಗಟ್ಟೆ ಹಾಗೂ ಸಾಂಪ್ರದಾಯಿಕ ಮತಗಟ್ಟೆ ಸೇರಿ ನಾಲ್ಕು ವಿಶೇಷ ಮತಗಟ್ಟೆಗಳಂತೆ ಏಳು ವಿಧಾನಸಭಾ ಕ್ಷೇತ್ರದಲ್ಲಿ 28 ಮತಗಟ್ಟೆಗಳನ್ನೂ ತೆರೆಯಲಾಗಿದೆ.
ಗಮನ ಸೆಳೆಯುವ ಚಿತ್ರಗಳು; ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಲ್ಲಿಹರವಿ ಮತಗಟ್ಟೆ ಕೇಂದ್ರಕ್ಕೆ ಲಂಬಾಣಿ ಜನಾಂಗದ ಸಾಂಪ್ರದಾಯಿಕ ಉಡುಪು ಚಿತ್ರ ಬಿಡಿಸಲಾಗಿದೆ. ಹೀಗೆ ಆಯಾ ಸ್ಥಳೀಯ ಆಕರ್ಷಣೀಯ ಸ್ಥಳ, ವಸ್ತುಗಳ ಚಿತ್ರ ರಚಿಸಿ, ಮತಗಟ್ಟೆಗಳ ಚೆಂದ ಹೆಚ್ಚಿಸಲಾಗಿದೆ.