ಬೆಳೆ ಪರಿಹಾರ: 6083 ರೈತರಿಗೆ ಬಾಕಿ
ಧಾರವಾಡ: ಜಿಲ್ಲೆಯಲ್ಲಿ 6083 ರೈತರಿಗೆ ತಾಂತ್ರಿಕ ಕಾರಣದಿಂದಾಗಿ ಬೆಳೆ ಹಾನಿ ಪರಿಹಾರ ಪಾವತಿಯಾಗಿಲ್ಲ. ಈ ಪೈಕಿ 4918 ರೈತರ ತಾಂತ್ರಿಕ ದೋಷ ಸರಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 660 ರೈತರು ಮೃತಪಟ್ಟಿದ್ದು, ಇನ್ನು 505 ಮಂದಿ ಪರಸ್ಥಳಗಳಲ್ಲಿ ನೆಲೆಸಿದ್ಧಾರೆ. ತಾಂತ್ರಿಕದೋಷ ಸರಿಪಡಿಸಿಕೊಳ್ಳುವಂತೆ ಪರಸ್ಥಳಗಳಲ್ಲಿ ನೆಲೆಸಿರುವ ರೈತರಿಗೆ ಗ್ರಾಮ ಆಡಳಿತ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ ಎಂದರು.
ಆಧಾರ್ ಕಾರ್ಡ್ ಮತ್ತು ‘ಫ್ರೂಟ್ಸ್’ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಐಡಿಯಲ್ಲಿ ಹೆಸರು ವ್ಯತ್ಯಾಸ, ಬ್ಯಾಂಕ್ ಖಾತೆಗೆ ಆಧಾರ ಮ್ಯಾಪ್ ಆಗದಿರುವುದು,
ಬ್ಯಾಂಕ್ ಖಾತೆ ನಿಷ್ಕ್ರಿಯ ಮೊದಲಾದ ತಾಂತ್ರಿಕ ಕಾರಣಗಳಿಂದ ಪರಿಹಾರ ಪಾವತಿಯಾಗಿಲ್ಲ. ತಾಂತ್ರಿಕ ದೋಷದಿಂದ ಪರಿಹಾರ ಮೊತ್ತ ಜಮೆಯಾಗದೆ ಇರುವ ರೈತರು ಕೂಡಲೇ ಸಮೀಪದ ತಹಶೀಲ್ದಾರ್ ಕಚೇರಿ, ಬ್ಯಾಂಕ್ ಸಂಪರ್ಕಿಸಿ ತಾಂತ್ರಿಕ ದೋಷ ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದು ಎಂದರು.
ಬೆಳೆ ಹಾನಿ ಪರಿಹಾರ ಈವರೆಗೆ ಒಟ್ಟು 10 ಹಂತಗಳಲ್ಲಿ 1.06 ಲಕ್ಷ ರೈತರಿಗೆ (1.23 ಲಕ್ಷ ಹೆಕ್ಟೇರ್ ಜಮೀನು) ಒಟ್ಟು ₹ 108 ಕೋಟಿ ಪಾವತಿಯಾಗಿದೆ. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ (ಎರಡೂವರೆ ಎಕರೆ) ₹ 8500 ಹಾಗೂ ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ ₹ 17 ಸಾವಿರ ಪರಿಹಾರ ನಿಗದಿಯಾಗಿದೆ. ಗರಿಷ್ಠ ಎರಡು ಹೆಕ್ಟೇರ್‌ವರೆಗೆ ಬೆಳೆ ಹಾನಿ ನೀಡಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ಸಹಾಯವಾಣಿಗೆ ಈವರೆಗೆ 1292 ದೂರು ದಾಖಲಾಗಿವೆ. ದೂರುಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಪಡೆದು ಪರಿಹರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.