ಹೆಸರು ಹಾಳುಮಾಡಲು ಷಡ್ಯಂತ್ರ
ಸುಳ್ಳು ಆರೋಪಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ
ಹುಬ್ಬಳ್ಳಿ: ಕಾಣದ ಕೈಗಳು ಷಡ್ಯಂತ್ರ ರೂಪಿಸಿ ಹೆಸರು ಹಾಳು ಮಾಡುವ ತಂತ್ರ ನಡೆಸುತ್ತಿವೆ ಎಂದು ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಆರೋಪಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗಳ ಹೆಸರಿನಲ್ಲಿ ಖೊಟ್ಟಿ ದಾಖಲೆ ಪಡೆಯಲಾಗಿದೆ ಎಂಬುವುದು ಸುಳ್ಳು ಆರೋಪ. ನಾನು ಮೂಲತಃ ಹಿಂದೂ ಬೇಡ ಜಂಗಮ. ಕರ್ನಾಟಕ ರಾಜ್ಯ ಬೇಡ ಜಂಗಮ ಸೇವಾ ಸಂಸ್ಥೆಯ ಯುವ ಘಟಕದ ಅಧ್ಯಕ್ಷನಿದ್ದೇನೆ. ಸಂಘಟನೆಯಲ್ಲಿ ೫೦ ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಕೇಂದ್ರ ಸರ್ಕಾರ ಮಾಡಿರುವ ಜಾತಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ ೧೯ರಲ್ಲಿ ಬೇಡ ಜಂಗಮ ಜಾತಿ ಬರುತ್ತದೆ. ಅದರ ಅಡಿ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ. ಸರ್ಕಾರವೇ ಈ ಪ್ರಮಾಣ ಪತ್ರ ನೀಡಿದೆ. ಇಂದು ತಮ್ಮ ಲಾಭಕ್ಕಾಗಿ ಜಾತಿ ಪ್ರಮಾಣ ಪತ್ರ ಹರಿಬಿಡುತ್ತಿದ್ದಾರೆ ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದರು.
ಇನ್ನೂ ಈರಣ್ಣಾ ನನ್ನ ಆಪ್ತ ಸಹಾಯಕನಾಗಿ ಹಿಂದೆ ಕಾರ್ಯ ನಿರ್ವಹಿಸಿದ್ದೇನೆ. ಆತ ಕಾಂಗ್ರೆಸ್ ಕಾರ್ಯನರ್ತನೂ ಹೌದು. ಆತನ ಮೇಲಿರುವ ಫೋಕ್ಸೋ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಕುರಿತು ಹಿಂದೆ ನ್ಯಾಯಾಲಯದ ವಿಚಾರಣೆಯ ಎಲ್ಲ ಸಂದರ್ಭದಲ್ಲೂ ಹಾಜರಾಗಿದ್ದಾನೆ. ಕಷ್ಟ ಎಂದು ಬಂದಿದ್ದಕ್ಕೆ ಕೆಲಸ ನೀಡಿದ್ದೇನೆ. ಆತ ಎಲ್ಲಿಯೂ ಹೋಗಿಲ್ಲ. ಎಲ್ಲರ ಕಣ್ಮುಂದೆಯೇ ಇದ್ದಾನೆ. ಇಲ್ಲಿ ಯಾರನ್ನು ರಕ್ಷಣೆ ಮಾಡುವ ವಿಚಾರವಿಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗಲಿ ಎಂದರು.
ಅಂಜಲಿ ತಂಗಿ ಚಿಕ್ಕವಳು. ಮಾಹಿತಿ ಕೊರತೆಯಿಂದ ಹೇಳಿಕೆ ನೀಡಿರಬಹುದು. ಕೇವಲ ನನ್ನ ವಾರ್ಡ್ ಮಾತ್ರವಲ್ಲ. ಇಂತಹ ಪ್ರಕರಣಗಳು ಎಲ್ಲಿಯೇ ನಡೆದರೂ ಆ ಕುಟುಂಬದ ಬೆನ್ನಿಗೆ ನಿಲ್ಲುತ್ತೇನೆ. ಮಗಳ ಕಳೆದುಕೊಂಡ ನೋವು ಎನೆಂಬುವುದು ನನಗೆ ಗೊತ್ತು ಎಂದರು.
ರಾಜಕೀಯ ಮಾಡುವವರು ಮಾಡುತ್ತಲೇ ಹೊಗಲಿ ನಾನು ಮಾತ್ರ ಜನಸೇವೆ ಮಾಡುತ್ತೇನೆ. ನೊಂದ ಮನೆಗಳಲ್ಲಿ ರಾಜಕೀಯ ಬೇಡ. ದಾರಿ ತಪ್ಪಿಸುವ ಕೆಲಸವಾಗದಿರಲಿ ಎಂದು ತಿಳಿಸಿದರು.