ಸಂಪ್ರದಾಯಬದ್ದ
ಬಾಸಿಂಗಕ್ಕೆ ಆಧುನಿಕ ಸ್ಪರ್ಶ
ಮದುವೆ ಸಂದರ್ಭದಲ್ಲಿ ಬಾಸಿಂಗಕ್ಕೆ ಮಹತ್ವದ ಸ್ಥಾನವಿದೆ. ಅದಕ್ಕೆ ತನ್ನದೆಯಾದ ಗೌರವವಿದೆ. ಅದು ವರನ ಶೃಂಗಾರದ ಅವಿಭಾಜ್ಯ ಅಂಗವೂ ಹೌದು. ವರ ಧರಿಸುವ ರಿಸುಗಳಲ್ಲಿ ಅದಕ್ಕೆ ಕಿರೀಟದ ಸ್ಥಾನ ಕಲ್ಪಿಸಲಾಗಿದೆ. ಇಂಥ ಬಾಸಿಂಗವನ್ನು ಲಾಭದ ನಿರೀಕ್ಷೆಯಿಲ್ಲದೆ ಸಂಪ್ರದಾಯ ಬದ್ಧವಾಗಿ ಕಳೆದ ೫೦ ವರ್ಷಗಳಿಂದ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ವಾಲಿಯವರ ಕುಟುಂಬ ತಯಾರಿಸುತ್ತಿದೆ.
ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕಲೆಯನ್ನು ಶಂಕ್ರಪ್ಪ ವಿರೂಪಾಕ್ಷಪ್ಪ ವಾಲಿ ಶ್ರದ್ಧೆಯಿಂದ ಸಂಪ್ರದಾಯ ಬದ್ಧವಾಗಿ ಕುಟುಂಬ ಸದಸ್ಯರೊಂದಿಗೆ ನಿರ್ವಹಿಸುತ್ತಿದ್ದಾರೆ.
ಸಂಪ್ರದಾಯ- ಶ್ರಮ-ಕಲೆ
ಬಾಸಿಂಗ ತಯಾರಿಕೆ ಸುಲಭವಾದ ಕೆಲಸವಲ್ಲ. ಸಂಪ್ರದಾಯ ಬದ್ಧವಾಗಿ ಬಾಸಿಂಗ ನಿರ್ಮಿಸಲು ಕೆಲವು ದಿನಗಳನ್ನು ತಯಾರಿಕೆಗಾಗಿಯೇ ಮೀಸಲಿಡಬೇಕಾಗುತ್ತದೆ. ಒಂದು ಜೊತೆ ಬಾಸಿಂಗ ತಯಾರಿಸಲು ೨೦ ರಿಂದ ೨೫ ದಿನ ಕಸೂತಿ ಕೆಲಸ ಮಾಡಬೇಕಾಗುತ್ತದೆ. ಬಾಸಿಂಗ ತಯಾರಿಕೆಯಲ್ಲಿ ಕಲಾವಿದ ಯಾವುದೇ ಯಂತ್ರದ ಸಹಾಯವಿಲ್ಲದೆ ಕೈಯಿಂದ ಆಕರ್ಷಣೀಯವಾಗಿ ಕೆಲಸ ನಿರ್ವಹಿಸುವಾಗ ಬಹುವಿಧವಾದ ಎಚ್ಚರಿಕೆ ವಹಿಸಬೇಕಾಗುತ್ತದೆ. ತಮ್ಮ ಕುಟುಂಬದಿಂದ ಬಳುವಳಿಯಾಗಿ ಬಂದಿರುವ ಶ್ರಮ ಬಯಸುವ ಕಲೆಯನ್ನು
ಸದಸ್ಯರೆಲ್ಲರೂ ಕಷ್ಟದ ಮಧ್ಯೆಯೂ ಇಷ್ಟಪಟ್ಟು ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದಾರೆ.
ಆಧುನಿಕತೆಯ ಲೇಪನ
ಬಾಸಿಂಗ್ ಮದುವೆಯ ಕೇಂದ್ರ ಬಿಂದು. ವಧು-ವರರು ಧರಿಸಲೇಬೆಕಾದ ಆಭರಣ. ಸಂಪ್ರದಾಯದಂತೆ ಮಾಂಗಲ್ಯಧಾರಣೆ ಸಂದರ್ಭದಲ್ಲಿ ಇರ್ವರು ಹಣೆಗೆ ಕಟ್ಟಿಕೊಂಡು ಧಾರ್ಮಿಕ ವಿ ವಿಧಾನಗಳನ್ನು ನೆರವೇರಿಸುವುದು ವಾಡಿಕೆ. ಸಂಪ್ರದಾಯದ ಅನುಸಾರ ನೈಸರ್ಗಿಕವಾದ ಬೆಂಡು ಹಾಗೂ ಮುಳ್ಳಿನಿಂದ ತಯಾರಿಸಿದ ಬಾಸಿಂಗ್ ಧಾರಣೆ ಮಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಜನರ ಬೇಡಿಕೆಗಳು ಭಿನ್ನವಾಗಿದ್ದು, ಅಲಂಕೃತ ಬಾಸಿಂಗ್‌ಕ್ಕೆ ಬೇಡಿಕೆಯಿದೆ. ಜನರ ಇಚ್ಛೆಯ ಅನುಸಾರ ವಾಲಿಯವರ ಕುಟುಂಬ ಸಂಪ್ರದಾಯದ ಬಾಸಿಂಗ್‌ಕ್ಕೆ ಅಧುನಿಕ ಟಚ್ ನೀಡಿದ್ದಾರೆ. ಬೆಂಡು ಹಾಗೂ ಮುಳ್ಳಿನಿಂದ ನಿರ್ಮಿಸುತ್ತಿದ್ದ ಬಾಸಿಂಗದಲ್ಲಿ ಮುತ್ತು, ಹವಳ, ಮಿಂಚು ಸೇರಿದಂತೆ ಸೌಂದರ್ಯ ಹೆಚ್ಚಳಕ್ಕೆ ಸಹಕಾರಿ ವಸ್ತುಗಳ ಬಳಕೆ ಮಾಡಿ ಆಧುನಿಕ ಶೈಲಿಗೆ ಹೊಂದುವಂತಹ ಬಾಸಿಂಗ ತಯಾರಿಸಿ ಮದುವೆ ಸಮಾರಂಭದ ಕಳೆ ಹೆಚ್ಚಿಸುತ್ತಿದ್ದಾರೆ.
ಲಿಂಗಾಯತ, ಜಂಗಮ, ಕುರುಬ, ವಾಲ್ಮೀಕಿ, ಲಂಬಾಣಿ, ವಿಶ್ವಕರ್ಮ, ಬ್ರಾಹ್ಮಣ, ಕುಂಬಾರ, ನೇಕಾರ ಹೀಗೆ ಒಂದೊಂದು ಸಮುದಾಯದಲ್ಲಿಯೂ ಒಂದೊಂದು ವಿಶಿಷ್ಟ ವಿನ್ಯಾಸದ ಬಾಸಿಂಗ ಬಳಕೆಯಲ್ಲಿದೆ. ಅವರ ಬೇಡಿಕೆ ಅನುಸಾರ ವಧು-ವರರಿಗೆ ಹೊಲಿಕೆಯಾಗುವಂತಹ ಬಾಸಿಂಗ್ ತಯಾರಿಕೆ ಮಾಡುತ್ತಿದ್ದಾರೆ
ಬಾಸಿಂಗ ತಯಾರಿಕೆ ವಿಧಾನವೇ ವಿಶಿಷ್ಟ
ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಗಮನ ಸೆಳೆಯುವ ಬಾಸಿಂಗ್ ತಯಾರಿಕೆ ವಿಧಾನವೇ ವಿಶಿಷ್ಟವಾದದ್ದು, ನೋಡಲು ಸುಲಭಕ್ಕೆ ಕಂಡರೂ ಮಾಡಲು ಬಲು ಕಷ್ಟವೇನಿಸುವ ಕೆಲಸವಿದು. ಬಾಸಿಂಗ್ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳಲ್ಲಿ ಬೆಂಡು ಪ್ರಮುಖವಾದ್ದು, ಬೆಂಡನ್ನು ನದಿ ಹಾಗೂ ಹಳ್ಳದಿಂದ ಸಂಗ್ರಹಿಸಬೇಕಾಗುತ್ತದೆ. ಹಸಿಯಾದ ಬೆಂಡನ್ನು ಕೆಲದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಬಾಸಿಂಗ್ ತಯಾರಿಕೆಗೆ ಅಣಿಗೊಳಿಸಬೇಕಾಗುತ್ತದೆ. ಇನ್ನು ಬೇರೆ ವಿಧದ ಬಾಸಿಂಗ್ ನಿರ್ಮಿಸಲು ಬಣ್ಣ, ಸುನೇರಿ ಹಾಳೆ, ಕನ್ನಡಿ ಹರಳು, ಮುತ್ತು, ಮನೆದೇವರ ಚಿತ್ರ, ಕಮಾನು, ಟಿಕಳಿ, ಹೂವು, ದಾರ ಸೇರಿದಂತೆ ಹಲವು ವಸ್ತುಗಳ ಅಗತ್ಯ.
ಮೊದಲಿಗೆ ಬೆಂಡನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಒಂದು ಕಚ್ಚಾ ರೂಪ ನೀಡಬೇಕು. ತದನಂತರ ಅದೇ ಬೆಂಡಿನಿಂದ ಹೂ ಕುಂಡಲ, ದೇವರ ಮೂರ್ತಿ, ಕಮಾನ್ ತಯಾರಿಸಿ ಬಣ್ಣ ನೀಡಬೇಕು. ತದನಂತರ ಬಣ್ಣದ ಹಾಳೆ, ಟಿಕಳಿ, ಕನ್ನಡಿ, ಟಿಕಳಿ ಸೇರಿದಂತೆ ಅಲಂಕೃತ ವಸ್ತುಗಳಿಂದ ಶೃಂಗರಿಸಬೇಕು. ಇಷ್ಟೆಲ್ಲಾ ಪ್ರಕ್ರಿಯೆ ನಂತರ ಒಂದು ಚೆಂದದ ಬಾಸಿಂಗ್ ರೂಪ ಪಡೆಯುತ್ತದೆ.
ವೈವಿಧ್ಯಮಯ ಬಾಸಿಂಗಗಳು
ಸಂಪ್ರಯದಾಯಕ್ಕೆ ತಕ್ಕಂತೆ ಧಾರ್ಮಿಕ ವಿ ವಿಧಾನಕ್ಕೆ ಅನುಸಾರವಾದ ಬಾಸಿಂಗ ಆಧುನಿಕತೆಗೆ ತಕ್ಕಂತೆ ಬದಲಾವಣೆ ಹೊಂದಿದೆ. ಬೆಂಡು ಹಾಗೂ ಮುಳ್ಳು ಒಂದಿಷ್ಟು ಮುಳ್ಳಿನಿಂದ ಮಾತ್ರ ತಯಾರಾಗುತ್ತಿದ್ದ ಬಾಸಿಂಗ ಹಲವು ಅಲಂಕೃತ ವಸ್ತುಗಳಿಂದ ಶೃಂಗಾರಗೊಳ್ಳುತ್ತಿದ್ದು, ಇಚ್ಚೆಯ ಅನುಸಾರ ಸಂಪ್ರದಾಯದ ಜೊತೆಗೆ ಆಧುನಿಕ ರೂಪ ಪಡೆದುಕೊಳ್ಳುತ್ತಿದೆ. ಗ್ರಾಹಕರ ಬೇಡಿಕೆಯಂತೆ ಕಲಾವಿದ ಶಂಕ್ರಪ್ಪ ವಾಲಿ ಸಂಪ್ರದಾಯಕ್ಕೆ ಕಿಂಚಿತ್ತು ಧಕ್ಕೆ ಬರದಂತೆ ವಿವಿಧ ಬಗೆಯ ಬಾಸಿಂಗ ತಯಾರಿಸಿ ನೀಡುತ್ತಿದ್ದಾರೆ. ಇವರ ಕೈಚಳಕದಲ್ಲಿ ಗುಡಿ ಬಾಸಿಂಗ, ಕಮಾನು ಬಾಸಿಂಗ, ಹುಲಿ ಬಾಸಿಂಗ, ಕಿರೀಟ ಬಾಸಿಂಗ, ಸಾದಾ ಬಾಸಿಂಗ, ಮುತ್ತಿನ ಬಾಸಿಂಗ, ಮರಾಠಿ ಬಾಸಿಂಗ ಇತ್ಯಾದಿ ವರ್ಣರಂಜಿತ ಬಾಸಿಂಗಗಳು ತಯಾರಾಗುತ್ತಿವೆ.
ಮುತ್ತಿನ ಬಾಸಿಂಗದ ಸವಾಲು
ಲಾಭದ ನಿರೀಕ್ಷೆಯಲ್ಲಿದೆ ಹಿರಿಯರಿಂದ ಬಳುವಳಿಯಾಗಿ ಬಂದ ಕಾಯಕವನ್ನು ನಿಷ್ಠೆಯಾಗಿ ನಿರ್ವಹಿಸುತ್ತಿರುವ ವಾಲಿಯವರ ಕುಟುಂಬಕ್ಕೆ ಒಂದೆಡೆ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಇನ್ನೊಂದೆಡೆ ಕಚ್ಚಾ ಸಾಮಗ್ರಿ ಪೂರೈಸುವವರ ಕೊರತೆಯಿದೆ. ಬಾಸಿಂಗ ತಯಾರಿಕೆಗೆ ಬೇಕಾಗುವ ಬೆಂಡು ಹಳ್ಳ ದಲ್ಲಿ ಬೆಳೆಯುವುದರಿಂದ ಅನುಭವ ಇದ್ದವರು ಮಾತ್ರ ಬೆಂಡು ಪೂರೈಸಲು ಸಾಧ್ಯ. ಕೆಲವು ಬಾರಿ ಪುರೈಕೆದಾರರ ಕೊರತೆಯಿಂದ ಕಚ್ಚಾ ವಸ್ತು ಸಿಗುವುದು ಕಷ್ಟ. ಇಂತಹ ಹಲವು ಸಮಸ್ಯೆಗಳನ್ನು ಎದುರಿಸಿ ತಮ್ಮ ಕಲೆಯ ಮೂಲಕ ಸುಂದರ ಬಾಸಿಂಗ ತಯಾರಿಸಿ ಶುಭಕಾರ್ಯಕ್ಕೆ ಸಾಕ್ಷಿಯಾಗುತ್ತಾರೆ.
ಮೆರವಣಿಗೆಯ ಮೆರಗು
ಮದುವೆಯ ದಿನದಂದು ಅಕ್ಷತೆ ವೇಳೆಯಲ್ಲಿ ಹಸೆಮಣೆಯಲ್ಲಿ ಕುಳಿತುಕೊಂಡಿರುವ ವರನ ಹಣೆಗೆ ಬಾಸಿಂಗ ಕಟ್ಟುವುದು ಮದುವೆಯ ವಿಗಳಲ್ಲಿ ಒಂದು ಬಹುಮುಖ್ಯ ಕ್ರಮ. ಕನ್ಯೆಯ ಶೃಂಗಾರ ಬೇರೆಯೇ ರೀತಿಯದು. ಆಕೆಗೆ ತಲೆ ತುಂಬ ಹೂವಿನ ದಂಡೆಯ ಶೃಂಗಾರ. ಮದುವೆಗಿನ್ನು ನಾಲ್ಕೈದು ದಿನಗಳು ಬಾಕಿ ಉಳಿದಿವೆ ಎನ್ನುವಾಗ ವರನ ಮನೆಯವರು ಬಾಸಿಂಗ ತಯಾರಕನ್ನು ಸಂಪರ್ಕಿಸಿ ಬಾಸಿಂಗ ತಯಾರಿಸುವಂತೆ ಸೂಚಿಸುತ್ತಾರೆ. ಒಂದು ಸಾಂಕೇತಿಕ ಮೊತ್ತ ಪಾವತಿಸಿ ಹಿಂತಿರುಗುತ್ತಾರೆ. ಮದುವೆಯ ಹಿಂದಿನ ದಿನ ತಯಾರಾದ ಬಾಸಿಂಗವನ್ನು ಹೊಸ ಬಿದಿರಿನ ಬುಟ್ಟಿಯಲ್ಲಿರಿಸಿಕೊಂಡು ಮನೆಗೆ ತಂದು ದೇವರ ಕೋಣೆಯಲ್ಲಿ ಇರಿಸುತ್ತಾರೆ.
ಮದುವೆ ದಿನ ಮಾಂಗಲ್ಯಧಾರಣೆ ಸಮಯದಲ್ಲಿ ಪುರೋಹಿತರ ಅಪ್ಪಣೆ ಮೇರೆಗೆ ವರನ ಮಾವಂದಿರು ಅಥವಾ ಇತರ ಸಮೀಪದ ಬಂಧುಗಳು ವರನಿಗೆ ಬಾಸಿಂಗ ಧಾರಣೆ ಮಾಡುತ್ತಾರೆ. ಕಟ್ಟಿದ ಬಾಸಿಂಗ ಎಲ್ಲಿಯಾದರೂ ತಾಗಿ ಉದುರಿದರೆ ಅಥವಾ ಹಣೆಯಿಂದ ಬಿದ್ದರೆ ಅಪಶಕುನವೆಂಬ ನಂಬಿಕೆ ಗ್ರಾಮೀಣರಲ್ಲಿದೆ. ಹಾಗಾಗಿ ಮದುವೆ ವಿ-ವಿಧಾನಗಳುದ್ದಕ್ಕೂ ಹಣೆಯನ್ನೇರಿದ ಬಾಸಿಂಗವನ್ನು ಜೋಪಾನವಾಗಿ ನೋಡಿಕೊಳ್ಳಲಾಗುತ್ತದೆ.
ಆಧುನಿಕತೆಗಿಂತ ಸಂಪ್ರದಾಯ ಮುಖ್ಯ
ಆಧುನಿಕತೆಯ ಗುಂಗಿನಲ್ಲಿ ನಮ್ಮ ಹಲವು ಸಂಪ್ರದಾಯದಯಗಳು ಕಥೆಯಾಗುತ್ತಿವೆ. ಇಂತಹ ಪ್ರಕ್ರಿಯೆಗೆ ಬಾಸಿಂಗವೂ ಹೊರತಾಗಿಲ್ಲ. ಪ್ರತಿಯೊಂದಕ್ಕೂ ಹೊಸ ಸ್ಪರ್ಶದ ಹೆಸರಿನಲ್ಲಿ ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ. ಎಲ್ಲ ಆಚರಣೆಗಳಿಗೂ ಹಿನ್ನೆಲೆಯಿದೆ. ಅದರಂತೆ ಬಾಸಿಂಗಕ್ಕೂ ಧಾರ್ಮಿಕ ಹಾಗೂ ಪೌರಣಿಕ ಮಹತ್ವವಿದೆ. ಶಿವ- ಪಾರ್ವತಿ ಸೇರಿದಂತೆ ದೇವಾನು ದೇವತೆಗಳು ಬಾಸಿಂಗ ಕಟ್ಟಿಕೊಂಡೆ ದಾಪಂತ್ಯಕ್ಕೆ ಕಾಲಿಟ್ಟರು ಎಂಬ ಪ್ರತೀತಿಯಿದೆ. ಇನ್ನು ಇದೇ ಬಾಸಿಂಗ ದಾಪಂತ್ಯ ಜೀವನದ ಜವಾಬ್ದಾರಿ ಇನ್ನು ಮುಂದೆ ನಿಮ್ಮ ತಲೆ ಮೇಲಿದೆ ಎಂಬ ಸಂದೇಶವನ್ನು ಸಾರುತ್ತದೆ. ಇಂತಹ ಬಾಸಿಂಗ ಆಧುನಿಕತೆಯ ಹೆಸರಿನಲ್ಲಿ ತನ್ನ ರೂಪ ಬದಲಿಸಿಕೊಂಡಿದ್ದು, ಸಂಪ್ರದಾಯ ಬಾಸಿಂಗಕ್ಕಿಂತ ಮಾರುಕಟ್ಟೆಯಲ್ಲಿ ದೊರೆಯುವ ಮುತ್ತಿನ ಬಾಸಿಂಗದತ್ತ ಜನರು ಮುಖ ಮಾಡುತ್ತಿದ್ದಾರೆ. ಇದರಿಂದ ಕಲೆಯನ್ನೇ ನಂಬಿ ಬದುಕು ನಿರ್ವಹಿಸುತ್ತಿರುವ ಹಲವು ಕುಟುಂಬಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿವೆ. ಆಧುನಿಕತೆಯ ಆಮಿಷಕ್ಕೆ ಸಾಂಪ್ರದಾಯಿಕ ಕಸುಬುಗಳು ಬಲಿಯಾಗದೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂಬುದು ಬಾಸಿಂಗ ತಯಾರಕರ ಅಪೇಕ್ಷೆ.
ಸಂಪ್ರದಾಯ ಉಳಿಯಲಿ
ಬಾಸಿಂಗ ತಯಾರಿಕೆ ಕೆಲಸವಲ್ಲ. ಇದೊಂದು ಧಾರ್ಮಿಕ ಸೇವೆ. ದಾಪಂತ್ಯಕ್ಕೆ ಕಾಲಿಡುವ ನವಜೋಡಿಗಳಿಗೆ ಕುಟುಂಬದಿಂದ ನೀಡುವ ಉಡುಗೊರೆ. ಲಾಭದ ನಿರೀಕ್ಷೆಗಿಂತಲೂ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕಲೆಯನ್ನು ಉಳಿಸುವ ಉದ್ದೇಶದಿಂದ ಕುಟುಂಬದ ಎಲ್ಲ ಸದಸ್ಯರು ಬಾಸಿಂಗ ತಯಾರಿಕೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಮೊದಲಿನಂತೆ ಬಾಸಿಂಗಕ್ಕೆ ಬೇಡಿಕೆಯಿಲ್ಲ. ಇತ್ತೀಚೆಗೆ ಜನರು ಮಾರುಕಟ್ಟೆಯಲ್ಲಿ ಸುಲಭಕ್ಕೆ ದೊರೆಯುವ ಮುತ್ತಿನ ಬಾಸಿಂಗಕ್ಕೆ ಮರುಳಾಗುತ್ತಿದ್ದು, ನಮ್ಮ ಸಂಪ್ರದಾಯ ಮರೆಯುತ್ತಿದ್ದಾರೆ. ಕಾಲ ಬದಲಾದರೂ ನಮ್ಮ ಸಂಪ್ರದಾಯ ಉಳಿಯಬೇಕು ಎಂದು ಬಾಸಿಂಗ ತಯಾರಕ ಶಂಕ್ರಪ್ಪ ವಿರೂಪಾಕ್ಷಪ್ಪ ವಾಲಿ ಅಭಿಪ್ರಾಯಪಡುತ್ತಾರೆ.
ವಿಶೇಷ ವರದಿ; ರಾಮು ಲದ್ವಾ