*ಕಾನೂನು ವಿದ್ಯಾರ್ಥಿಗಳು ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಅರಿತುಕೊಳ್ಳಲಿ*
*-ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್*
ಹುಬ್ಬಳ್ಳಿ : ದೇಶದಲ್ಲಿ ಹಳೆಯ ಕ್ರಿಮಿನಲ್ ಕಾನೂನುಗಳನ್ನು ತೆಗೆದು ಹಾಕಲಾಗಿದೆ. ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿವೆ. ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಹೇಳಿದರು.
ಇಂದು ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೇಂದ್ರ ಸಂವಹನ ಇಲಾಖೆ, ಧಾರವಾಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅವಶ್ಯಕವಾಗಿದೆ. ಹೊಸ ಕಾನೂನುಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕು. ಹಳೆಯ ಕಾನೂನುಗಳು ಹಾಗೂ ಹೊಸ ಕಾನೂನುಗಳಲ್ಲಿ ಯಾವ ಯಾವ ಬದಲಾವಣೆಗಳು ಆಗಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಯುವಕರು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕಿದೆ. ತಮಗೆ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಮಯ ಪಾಲನೆಗೆ ಹೆಚ್ಚಿನ ಮಹತ್ವ ನೀಡಿ. ಕಠಿಣ ಅಭ್ಯಾಸದ ಮೂಲಕ ಯಶಸ್ಸು ದೊರೆಯಲಿದೆ. ಹಾಗಾಗಿ ಸತತ ಪ್ರಯತ್ನ ಹಾಗೂ ಸ್ಮಾರ್ಟ್ ಅಧ್ಯಯನದಿಂದ ಜೀವನದಲ್ಲಿ ಉನ್ನತ ಹುದ್ಧೆ ಅಲಂಕರಿಸಬಹುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಾ.ಸಿ.ಬಸವರಾಜು ಮಾತನಾಡಿ, ಹಳೆಯ ಕಾನೂನುಗಳಿಂದ ಅಪರಾಧಿಗಳಿಗೆ ಶಿಕ್ಷೆಯಾಗಲು ಬಹಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಹೊಸ ಕ್ರಿಮಿನಲ್ ಕಾನೂನುಗಳಿಂದ ದೇಶದ ಅಪರಾಧ ಪ್ರಕರಣಗಳಿಗೆ ತ್ವರಿತವಾಗಿ ಶಿಕ್ಷೆಯಾಗಲಿದೆ. ಕಾನೂನು ವಿದ್ಯಾರ್ಥಿಗಳಿಗೆ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೇಂದ್ರ ಸಂವಹನ ಇಲಾಖೆಯ ಮುರಳೀಧರ ಕಾರಭಾರಿ ಅವರು ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮ ಆಯೋಜನೆಯ ಉದ್ಧೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ನ್ಯಾಯಧೀಶರಾದ ಎಸ್.ಎಚ್.ಮಿಟ್ಟಲಕೋಡ ಅವರು ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆ 2024, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಕೆ.ಮಾಟೋಳ್ಳಿ ಅವರು ಭಾರತೀಯ ಸಾಕ್ಷ್ಯ ಅಧಿನಿಯಮ 2024 ಮತ್ತು ಧಾರವಾಡ ಹೈಕೋರ್ಟಿನ ವಕೀಲರಾದ ರಾಜೇಶ ನವಳಗಿಮಠ ಅವರು ಭಾರತೀಯ ನ್ಯಾಯ ಸಂಹಿತೆ 2024 ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹೊಸ ಕ್ರಿಮಿನಲ್ ಕಾನೂನುಗಳ ಕುರಿತ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸಿದ್ಧಿ ಎನ್., ವೈಶಾಖ, ಅಪರ್ಣಾ, ಎಲೋಕೇಷನ್ ಸ್ಪರ್ಧೆಯಲ್ಲಿ ವಿಜೇತರಾದ ಸಿಮ್ರನ್, ವೈಶಾಖ, ಮಲ್ಲಿಕಾರ್ಜುನ ಎಂ. ಮತ್ತು ಪಿಪಿಟಿ ಪ್ರಸೆಂಟೇಷನ್ ಸ್ಪರ್ಧೆಯಲ್ಲಿ ವಿಜೇತರಾದ ರೋಸ್ವಿತಾ, ಶ್ರೀನಿಧಿ ಹಾಗೂ ಸಿಮ್ರನ್ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವರಾದ ಅನುರಾಧ ವಸ್ತ್ರದ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಡಾ.ರತ್ನಾ ಆರ್. ಭರಮಗೌಡರ, ಸಹಾಯಕ ಪ್ರಾಧ್ಯಾಪಕರಾದ ಡಾ.ಸುನೀಲ ಬಗಾಡೆ, ಗಿರೀಶಗೌಡ ಪಾಟೀಲ, ಐ.ಬಿ.ಬಿರಾದಾರ, ಡಾ.ದೀಪಾ, ಮಹಾದೇವಿ, ಡಾ.ಪ್ರಶಾಂತ, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಮತಿ ಪ್ರಾರ್ಥಿಸಿದರು. ವಿನಾಯಕ ಅತಿಥಿಗಳನ್ನು ಪರಿಚಯಿಸಿದರು. ಶ್ರವಣಾ ನಿರೂಪಿಸಿದರು. ಲಕ್ಷ್ಮಿ ಸ್ವಾಗತಿಸಿ, ವಂದಿಸಿದರು.
*****