ಶಕ್ತಿ ಯೋಜನೆಯಿಂದ ನಿರ್ವಾಹಕರಿಗೆ ಸಂಕಷ್ಟ
ಹುಬ್ಬಳ್ಳಿ; ಶಕ್ತಿ ಯೋಜನೆ ರಾಜ್ಯದ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ. ಆದರೆ, ಸಾರಿಗೆ ನಿಗಮಗಳ ನಿರ್ವಾಹಕರಿಗೆ ಮಾತ್ರ ಕೆಲಸ ಕಳೆದುಕೊಳ್ಳುವ ಭೀತಿ ಶುರುವಾಗಿದೆ.
ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಶಕ್ತಿ ಯೋಜನೆ ರಾಜ್ಯದ ಎಲ್ಲ ಮಹಿಳೆಯರಿಗೂ ಅನುಕೂಲವಾಗಿದೆ. ಉಚಿತ ಎಂದು ಅವರು ಪ್ರಯಾಣ ಮಾಡುವಾಗ ಮಾಡುವ ಎಡವಟ್ಟುಗಳು ನಿರ್ವಾಹಕರ ಉದ್ಯೋಗಕ್ಕೆ ಕುತ್ತು ತರುವಂತಾಗಿದೆ.
ದೂರದ ಊರಿಗೆ ತೆರಳುವ ಬಸ್‌ಗಳಲ್ಲಿ ಬಹುತೇಕ ಪ್ರಯಾಣ ಮಾಡುವ ಮಹಿಳೆಯರು ಊಟಕ್ಕಾಗಿ ಬಸ್ ನಿಲ್ಲಿಸಿದಾಗ ಅವರು ಅದೇ ಬಸ್‌ನಲ್ಲಿ ಬಾರದೇ ಬೇರೆ ಬಸ್‌ಗಳಲ್ಲಿ ಪ್ರಯಾಣ ಮಾಡುವುದರಿಂದ ನಿರ್ವಾಹಕರ ಕೆಲಸಕ್ಕೆ ಕುತ್ತು ತರುತ್ತಿದೆ. ಇದು ಮಾತ್ರವಲ್ಲದೆ ಮಹಿಳಾ ಪ್ರಯಾಣಿಕರು ಯಾವ ಸ್ಥಳಕ್ಕೆ ಹೋಗಬೇಕೋ, ಅಲ್ಲಿಗೆ ಶೂನ್ಯ ದರದ ಟಿಕೆಟ್ ಪಡೆಯುತ್ತಾರೆ ನಿಲ್ದಾಣಗಳಲ್ಲಿ ಇಳಿದು ಹೋಗುತ್ತಾರೆ. ಈ ವೇಳೆ ಟಿಕೆಟ್ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಬಂದು ಪರಿಶೀಲಿಸಿದಾಗ, ಪ್ರಯಾಣಿಕರು ಇರುವುದಿಲ್ಲ. ಆದರೆ ಟಿಕೆಟ್ ನೀಡಲಾಗಿರುತ್ತದೆ. ಇದಕ್ಕೆ ನಿರ್ವಾಹಕರನ್ನು ಹೊಣೆಯಾಗಿಸಿ, ತನಿಖಾಧಿಕಾರಿಗಳು ದಂಡ ಹಾಕುವುದಲ್ಲದೆ. ನೋಟಿಸ್ ನೀಡುವುದು ಅಮಾನತು ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಇದರಿಂದ ತಪ್ಪು ಮಾಡದಿದ್ದರೂ ನಿರ್ವಾಹಕರು ಶಿಕ್ಷೆ ಅನುಭವಿಸುತ್ತಿದ್ದಾರೆ.
ಪ್ರಯಾಣದ ವೇಳೆ ಬಸ್‌ಗಳು ಯಾವುದಾದರೂ ಡಾಬಾ, ಹೊಟೇಲ್‌ಗಳಲ್ಲಿ ನಿಲ್ಲಿಸಿದಾಗ, ಒಂದು ಬಸ್‌ನಲ್ಲಿ ಟಿಕೆಟ್ ಪಡೆದು, ಇನ್ನೊಂದು ಬಸ್‌ನಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಟಿಕೆಟ್ ಪಡೆದ ಬಸ್‌ನಲ್ಲಿ ಆ ಪ್ರಯಾಣಿಕರು ಇಲ್ಲದಿದ್ದಾಗ ಅನಿವಾರ್ಯವಾಗಿ ಅವರಿಗಾಗಿ ಕಾಯುವಂತಾಗುತ್ತದೆ. ಅದರಲ್ಲೂ ರಾತ್ರಿ ವೇಳೆ ಮಹಿಳೆಯರು ಬೇರೆ ಬಸ್ ನಲ್ಲಿ ಪ್ರಯಾಣ ಮಾಡಿದರಂತೂ ನಿರ್ವಾಹಕರ ಸಮಸ್ಯೆ ಕೇಳುವವರೇ ಇಲ್ಲ. ಪ್ರಯಾಣಿಕರು ಬಸ್ ಹತ್ತದೇ ಇರುವುದರಿಂದ ಇತರೆ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ.
ಟಿಕೆಟ್ ಚೆಕ್ಕಿಂಗ್ ಮಾಡಲು ಬರುವ ತನಿಖಾಧಿಕಾರಿಗಳು ಯಾರಾದರೂ ಟಿಕೆಟ್ ತೆಗೆದುಕೊಳ್ಳದೇ ಇದ್ದಲ್ಲಿ ಅಥವಾ ಶೂನ್ಯ ಟಿಕೆಟ್ ಪಡೆದವರು ಬಸ್‌ನಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ನಿರ್ವಾಹಕರಿಗೆ ನೋಟಿಸ್ ನೀಡುತ್ತಾರೆ. ಈ ವೇಳೆ ತನಿಖಾಧಿಕಾರಿಗಳ ವರ್ತನೆ ಕಳ್ಳನನ್ನು ಹಿಡಿದ ರೀತಿ ಇರುತ್ತದೆ. ನಮ್ಮ ತಪ್ಪು ಇಲ್ಲದೇ ಇದ್ದರೂ ನಾವೇ ತಪ್ಪು ಮಾಡಿರುವುದು ಎಂಬಂತೆ ಬಿಂಬಿಸುವ ಕೆಲಸ ಮಾಡುತ್ತಾರೆ. ಇದರಿಂದ ಮೇಲಧಿಕಾರಿಗಳು ನಮ್ಮ ಮೇಲೆ ಕ್ರಮ ತೆಗೆದುಕೊಳ್ಳುವಂತಾಗಿದೆ. ಒಂದು ವೇಳೆ ಪ್ರಯಾಣಿಕ ಟಿಕೆಟ್ ಪಡೆಯದೇ ಇದ್ದಲ್ಲಿ ಅವರಿಗೆ ದಂಡ ಪ್ರಯೋಗ ಮಾಡಲಿ. ಒಂದು ವೇಳೆ ಪ್ರಯಾಣಿಕ ಹಣ ನೀಡಿ ನಾವು ಟಿಕೆಟ್ ನೀಡದೇ ಇದ್ದಲ್ಲಿ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂಬುದು ನಿರ್ವಾಹಕರ ಅಳಲು.
ನಿರ್ವಾಹಕರು ಅನುಭವಿಸುತ್ತಿರುವ ತೊಂದರೆ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೂರಿನ ರೂಪದಲ್ಲಿ ಕೆಲವು ನಿರ್ವಾಹಕರು ಮನವಿ ಮಾಡಿಕೊಂಡು ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಕೋರಿಕೊಂಡಿದ್ದಾರೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು. ಈ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚೆ ಮಾಡಿದ್ದು ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕಾಗಿದೆ. ಎಂದು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.