ಅಡವಿ ಸಿದ್ಧೇಶ್ವರ ಮಠಕ್ಕೆ ನೆರವು ನೀಡಲು ಮನವಿ
ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಂಕಲಗಿ ಶ್ರೀ ಅಡವಿ ಸಿದ್ಧೇಶ್ವರ ಮಠದ ಜೀರ್ಣೋದ್ಧಾರಕ್ಕೆ ಅನುದಾನ ನೀಡಿ ಎಂದು ಶ್ರೀಮಠದ ಪೀಠಾಧಿಪತಿ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮಸ್ಥರು ಶನಿವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿರುವ ಕೇಂದ್ರ ಸಚಿವರ ನಿವಾಸದಲ್ಲಿ ಮನವಿ ಮೂಲಕ ಒತ್ತಾಯಿಸಿದ ಗ್ರಾಮಸ್ಥರು ಶಿಥಿಲಾವಸ್ಥೆ ತಲುಪಿರುವ ಶ್ರೀಮಠದ ಪ್ರಸ್ತುತ ಸ್ಥಿತಿಯನ್ನು ವಿವರಿಸಿದರು.
೧೨ನೇ ಶತಮಾನದಲ್ಲಿ ಬಸವಣ್ಣನ ಸಮಕಾಲೀನರಾಗಿದ್ದ ಅಡವಿ ಸಿದ್ಧೇಶ್ವರರು ವಚನಗಳ ರಕ್ಷಣೆಯಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ. ಲೋಕ ಸಂಚಾರಗೈಯುತ್ತ ವಚನಗಳನ್ನು ಪ್ರಚಾರ ಮಾಡಿದ ಮಹಾತ್ಮರಾಗಿದ್ದಾರೆ. ಇಂತವರು ತಪಗೈದ ಬಮ್ಮಿಗಟ್ಟಿಯಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮಠ ಶಿಥಿಲಾವಸ್ಥೆ ತಲುಪಿದೆ. ಮೇಲ್ಛಾವಣಿ ಕುಸಿಯುವ ಭೀತಿ ಎದುರಾಗಿದ್ದು, ಅನುದಾನ ನೀಡುವ ಮೂಲಕ ಶ್ರೀಮಠದ ಜೀರ್ಣೋದ್ಧಾರಕ್ಕೆ ನೆರವಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿ ಅಧ್ಯಕ್ಷ ನೀಲಕಂಠಯ್ಯ ಕಂಬಿ, ನಾಗಪ್ಪ ಬಳಿಗೇರ, ಬಸಯ್ಯ ಕೋರಿಮಠ, ಮಹಾಲಿಂಗಪ್ಪ ಯಳವತ್ತಿ, ವಿರೂಪಾಕ್ಷಪ್ಪ ಕುಂಬಾರ, ಪ್ರಕಾಶ ಕಚ್ಚೂರಿ, ಈರಯ್ಯ ಕೋರಿಮಠ, ಜಗದೀಶ ಮೆಣಸಿನಕಾಯಿ, ಅಶೋಕ ಖಂಡೂನವರ, ಮಂಜುನಾಥ ಅರಳಿಕಟ್ಟಿ, ಮಲ್ಲೇಶ ನೆನಕ್ಕಿ, ಬಸವರಾಜ ಅದರಗುಂಚಿ, ಮಂಜುನಾಥ ಕಚ್ಚೂರಿ, ಶ್ರೀಶೈಲ ಮುಕ್ಕಣ್ಣವರ, ಶಂಕ್ರಯ್ಯ ಕಂಬಿ ಸೇರಿದಂತೆ ಬಮ್ಮಿಗಟ್ಟಿ ಗ್ರಾಮಸ್ಥರು ಇದ್ದರು.