ಸಂಭ್ರಮದ ದೀಪಾವಳಿ; ಕಣ್ಮನ ಸೆಳೆದ ಎತ್ತುಗಳ ಮೆರವಣಿಗೆ
ಧಾರವಾಡ; ಜಿಲ್ಲೆಯಾದ್ಯಂತ ಹಟ್ಟಿ ಹಬ್ಬವನ್ನು ಗ್ರಾಮೀಣ ರೈತರ ಮನೆಗಳಲ್ಲಿ ಅದ್ಧೂರಿಯಾಗಿ, ವೈವಿಧ್ಯ ಪೂರ್ಣವಾಗಿ ಆಚರಿಸಲಾಯಿತು. ದೀಪಾವಳಿ ಮೊದಲ ಎರಡು ದಿನಗಳಿಗಿಂತ ಮೂರನೇ ದಿನವಾದ ಬಲಿಪಾಡ್ಯಕ್ಕೆ ಜನರು ಹೆಚ್ಚಿನ ಪ್ರಾಧಾನ್ಯತೆ ನೀಡುವುದರಿಂದ ಶನಿವಾರ ಮನೆ ಮನೆಗಳಲ್ಲಿ ಸಂಭ್ರಮ ತುಂಬಿತ್ತು.
ಸೆಗಣಿಯಲ್ಲಿ ಪಾಂಡವರನ್ನು ರಚಿಸಿ, ಚೆಂಡು ಹೂವಿನ ಐದು ಗಿಡಗಳ ನಡುವೆ ಪ್ರತಿಷ್ಠಾಪಿಸಿದರು.
ಹಟ್ಟಿ ಲಕ್ಕವ್ವಗೆ ಚಿನ್ನಾಭರಣ, ವಸ್ತ್ರ, ಉತ್ರಾಣಿ ಕಡ್ಡಿ, ಹೂ, ಹಾರಗಳಿಂದ ಸಿಂಗರಿಸಿ, ಹೋಳಿಗೆ, ಕಡಬು ಇನ್ನಿತರ ಸಿಹಿ ಖಾದ್ಯಗಳ ನೈವೇದ್ಯ ಮಾಡಿ ಪೂಜಿಸಿದರು.
ಹಣತೆ ದೀಪಗಳ ಬೆಳಕಲ್ಲಿ ಲಕ್ಕವ್ವ ಫಳಫಳ ಹೊಳೆದಳು.
ಮನೆ, ಕೊಟ್ಟಿಗೆ, ವ್ಯಾಪಾರ, ಉದ್ಯೋಗಕ್ಕೆ ಬಳಸುವ ಕಸಬರಿಗೆಯಿಂದ ಹಿಡಿದು ಎಲ್ಲ ವಸ್ತುಗಳನ್ನೂ ತೊಳೆದು- ಸುಣ್ಣ ಬಣ್ಣ ಬಳಿದು ಅವುಗಳ ಸಮೀಪವೂ ಅರಿಶಿಣ-ಕುಂಕುಮ, ಉತ್ರಾಣಿ ಕಡ್ಡಿ, ಹೂಗಳಿಂದ ಸಿಂಗರಿಸಿದ ಸೆಗಣಿಯ ಪಾಂಡವರನ್ನು ಇಟ್ಟು ಪೂಜಿಸಿದರು. ಪಾಂಡವರು ಪಟ್ಟು ಕಷ್ಟ ಯಾರಿಗೂ ಬಾರದಿರಲಿ ಎಂಬ ಪ್ರಾರ್ಥನೆ ಈ ಆಚರಣೆಯೊಳಗೊಂಡಿದೆ.