- ರಾಡ್‌ಬಿದ್ದು ಎಎಸ್‌ಐಗೆ ಗಂಭೀರ ಗಾಯ
ಹುಬ್ಬಳ್ಳಿ: ಇಲ್ಲಿಯ ಕ್ಲಬ್ ರಸ್ತೆಯಲ್ಲಿನ ಪ್ರೈಓವರ್ ಮೇಲಿಂದ ಉಪನಗರ ಠಾಣೆ ಎಎಸ್‌ಐ ನಾಭಿರಾಜ ದಾಯಣ್ಣವರ (59) ಅವರ ಮೇಲೆ ಕಬ್ಬಿಣದ ರಾಡ್ ಬಿದ್ದು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಬೈಕ್‌ನಲ್ಲಿ ಠಾಣೆಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ನಾಭಿರಾಜ ಅವರನ್ನು ಕೆಎಂಸಿಆರ್‌ಐನ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಸ್ಪತ್ರೆಗೆ ಭೇಟಿ ನೀಡಿ, ‘ಸರ್ಕಾರದಿಂದ ಎಲ್ಲ ವೈದ್ಯಕೀಯ ನೆರವು ನೀಡಲಾಗುವುದು. ಸೂಕ್ತ ಚಿಕಿತ್ಸೆ ನೀಡುವಂತೆ’ ಸ್ಥಳದಲ್ಲಿದ್ದ ವೈದ್ಯರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇತರರು ಇದ್ದರು.
ಅನಾಹುತ ಸರಮಾಲೆ: ಫೈ ಓವರ್ ಕಾಮಗಾರಿ ಸ್ಥಳದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ.
ಕೆಳಗಡೆ ಹೋಗಲು ಕೆಲವರಿಗೆ ಹೆದರಿಕೆಯೂ ಉಂಟಾಗುತ್ತಿದೆ. ರಾತ್ರಿ ವೇಳೆ ಕತ್ತಲು ಹಾಗೂ ಧೂಳಿನಿಂದ ಕೂಡಿದ ವಾತಾವರಣವಿರುತ್ತಿದೆ. ಯಾವುದೇ ಸುರಕ್ಷತಾ ಕ್ರಮ ಅನುಸರಿಸದಿರುವುದರಿಂದ 2023 ಜೂನ್ 20ರಂದು ಕ್ಲಬ್ ರಸ್ತೆಯಲ್ಲಿ ಕಾಮಗಾರಿ ವೇಳೆ ಕ್ರೇನ್ ಬಿದ್ದು ಒಬ್ಬರು ಗಾಯಗೊಂಡಿದ್ದರು. 6 ವಿದ್ಯುತ್ ಕಂಬ ಬಿದ್ದು, ಒಂದು ವಾಹನ ಜಖಂಗೊಂಡಿತ್ತು. ಈಗ ಎಎಸ್‌ಐ ತಲೆಗೆ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸೂರು ಬಳಿ ಕಾಮಗಾರಿ ವೇಳೆಯೂ ಕಾರ್ಮಿಕರೊಬ್ಬರು ಗಾಯಗೊಂಡಿದ್ದರು. ಸಂಬಂಧಿಸಿದವರು ಈ ಬಗ್ಗೆ ನಿಗಾ ವಹಿಸಬೇಕು, ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.