ಹುಬ್ಬಳ್ಳಿ: ಕೆಎಸ್ ಸಿಎ ಧಾರವಾಡ ವಲಯವನ್ನು ಕನ್ವೇನಿಯರ್ ನಿಖಿಲ್ ಭೂಸದ ಅವರು ಬಿಡಿಕೆ ಫೌಂಡೇಶನ್ ಲಾಭಕ್ಕಾಗಿ ಉಪಯೋಗಿಸಿಕೊಳ್ಳುವ ಮೂಲಕ ಸಮಗ್ರ ಉತ್ತರ ಕರ್ನಾಟಕದ ಪ್ರತಿಭಾವಂತ ಕ್ರಿಕೆಟ್ ಪಟುಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೆಎಸ್ ಸಿಎ ಕ್ವಾಲಿಫೈಡ್ ಕೋಚ್ ಪ್ರಮೋದ ಕಾಮತ್ ಹಾಗೂ ಜಯರಾಜ್ ನೂಲ್ವಿ ಆರೋಪಿಸಿದ್ದಾರೆ.
ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕನ್ವೇನರ್ ನಿಖಿಲ್ ಭೂಸದ ಅವರ ವಿರುದ್ದ ಗಂಭೀರ ಆರೋಪ ಮಾಡಿದ ಅವರು, 14 ವಯೋಮಿತಿಯ ಕ್ರೀಡಾಪಟುಗಳ ಆಯ್ಕೆಯಲ್ಲಿ ನಿಯಮಾವಳಿಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ಆಯ್ಕೆ ನಡೆಸಲಾಗಿದ್ದು, ಇದರಿಂದ ಪ್ರತಿಭಾವಂತ ಕ್ರೀಡಾಪಟುಗಳ ಭವಿಷ್ಯದೊಂದಿಗೆ ಆಟವಾಡಿದ್ದಾರೆ ಎಂದು ಆರೋಪಿಸಿದರು.
ಸಿಲೆಕ್ಷನ್ ಕಮಿಟಿಯವರು ನಡೆಸಬೇಕಿರುವ ಆಯ್ಕೆಯಲ್ಲಿ ಭೂಸದ ಯಾವುದೇ ಕಾರಣಕ್ಕೂ ಭಾಗಿಯಾಗಬಾರದೆಂಬ ನಿಯಮ ಇದೆ. ಆದರೆ, ಇದ್ಯಾವುದನ್ನು ಪರಿಗಣಿಸದೇ, ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಂಡು ತಮಗೆ ಬೇಕಾದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ ಎಂದು ದೂರಿದರು.
ವೀಕ್ ತಂಡಗಳೊಂದಿಗೆ
ಬಿಡಿಕೆ ಫೌಂಡೇಶನ್ ನಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿರುವ ಕ್ರೀಡಾಪಟುಗಳಿಗೆ ವೀಕ್ ತಂಡಗಳೊಂದಿಗೆ ಆಡಿಸುವ ಮೂಲಕ ಸಿಲೆಕ್ಟ್ ಮಾಡುತ್ತಿರುವ ಭೂಸದ, ಬೇರೆ ಕ್ಲಬ್ ಗಳಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳಿಗೆ ಬಿಡಿಕೆ ಫೌಂಡೇಶನ್ ಗೆ ಸೇರುವಂತೆ ಒತ್ತಡ ಹೇರುತ್ತಿದ್ದಾರಲ್ಲದೆ, ತಮ್ಮ ಫೌಂಡೇಶನ್ ಗೆ ಸೇರ್ಪಡೆಯಾದಲ್ಲಿ ಮಾತ್ರ ವಲಯ ಮಟ್ಟದ ಕ್ರಿಕೆಟ್ ನಲ್ಲಿ ಆಡಲು ಅವಕಾಶ ಲಭ್ಯವಾಗಲಿದೆ ಎಂಬ ಸಂದೇಶ ರವಾನಿಸುತ್ತಿದ್ದಾರೆ ಎಂದು ದೂರಿದರು.
ಹಣ ಲೂಟಿ
ಡಿವಿಷನ್ ಮತ್ತು ಲೀಗ್ ಪಂದ್ಯಾವಳಿಗಳನ್ನು ನಡೆಸಿ ವಲಯ ಮಟ್ಟದ ಕ್ರಿಕೆಟ್ ಗೆ ಮ್ಯಾಚ್ ಗಳನ್ನು ನಡೆಸಿ ಅರ್ಹರ ಪಟ್ಟಿಯಲ್ಲಿ ಬೆಂಗಳೂರಿನ ಕೆಎಸ್ ಸಿಎಗೆ ಕಳುಹಿಸಿಕೊಡಬೇಕಾಗುತ್ತದರ. ಆದರೆ, ಭೂಸದ, ಡಿವಿಷನ್ ಹಾಗೂ ಲೀಗ್ ಮ್ಯಾಚ್ ಗಳನ್ನು ನಡೆಸಲು ಮೈದಾನದ ಲಭ್ಯತೆ ಇಲ್ಲ ಎಂಬ ಕಾರಣ ನೀಡಿ, ಇದೇ ಸಂದರ್ಭದಲ್ಲಿ ತಾವು ಪ್ರತಿನಿಧಿಸುತ್ತಿರುವ ಬಿಡಿಕೆ ಫೌಂಡೇಶನ್ ವತಿಯಿಂದ ಎಚ್ ಪಿಎಲ್ ಮ್ಯಾಚ್ ನಡೆಸಿ ನೂರಾರು ಪಾಲಕರಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ದಾಖಲಾತಿಗಳನ್ನು ಪ್ರದರ್ಶಿಸಿದರು.
14ರ ಆಯ್ಕೆಯಲ್ಲಿಯೂ
ಈಗಷ್ಟೇ ನಡೆಸಿರುವ 14 ವಯೋಮಿತಿಯ ಆಯ್ಕೆಯಲ್ಲಿಯೂ 44 ಕ್ತಿಕೆಟ್ ಪಟುಗಳ ಪೈಕಿ 7 ಕ್ರೀಡಾಪಟುಗಳನ್ನು ಬಿಡಿಕೆ ಫೌಂಡೇಶನ್ ಅವರನ್ನೇ ಆಯ್ಕೆ ಮಾಡಿರುವ ಭೂಸದ, ಅವರುಗಳ ಪ್ರತಿಭೆ ಇಲ್ಲದಿದ್ದರೂ ಕೇವಲ ಬಿಡಿಕೆ ಫೌಂಡೇಶನ್ ಬ್ಯಾನರಡಿ ಅವರುಗಳಿಗೆ ಆಯ್ಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಂಪು ಕಟ್ಟಿಕೊಂಡು
ಕೆಎಸ್ ಸಿಎ ಧಾರವಾಡ ವಲಯದಲ್ಲಿ ತನ್ನದೇ ಚಕ್ರಾಧಿಪತ್ಯದ ಗುಂಪು ಕಟ್ಟಿಕೊಂಡಿರುವ ಭೂಸದ, ಕೆಎಸ್ ಸಿಎ ಮೈದಾನವನ್ನು ತಾವು ಮನೆಯ ಪಾರದರ್ಶಿಗೆ ಹಾಗೂ ತಾವು ಪ್ರತಿನಿಧಿಸುತ್ತಿರುವ ಕ್ಲಬ್ ನ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟೀಸ್ ಮಾಡಲು ನೀಡುವ ಮೂಲಕ ಕೆಎಸ್ ಸಿಎ ಅನ್ನು ತಮ್ಮ ಮನೆಯ ಸ್ವತ್ತು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ಕನ್ವೇನರ್ ಸ್ಥಾನದಿಂದ ಕೆಳಗಿಳಿಸಿ
ಆಯ್ಕೆ ಪ್ರತಿಕ್ರಿಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಬರಲು ಹಾಗೂ ಧಾರವಾಡ ವಲಯದ ಪ್ರತಿಭಾವಂತ ಕ್ರಿಕೆಟ್ ಪಟುಗಳು ರಾಜ್ಯ ಹಾಗೂ ದೇಶದಲ್ಲಿ ಸಾಧನೆಗೈಯಲು ತಕ್ಷಣ ಧಾರವಾಡ ವಲಯ ಕನ್ವೇನರ್ ನಿಖಿಲ್ ಭೂಸದ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ 19, 23ರ ವಯೋಮಿತಿಯ ಆಯ್ಕೆಯಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯಕೋರಿ ನ್ಯಾಯಾಲಯದ ಮೊರೆ ಹೋಗಲಾಗಿದ್ದು, ಇದೀಗ 14 ವಯೋಮಿತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸದಿದ್ದಲ್ಲಿ ಮತ್ತೇ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ದಯಾನಂದ ಶೆಟ್ಟಿ, ಸಾಗರ ಪರ್ವತಿ, ಪವನ ಗೋಷ್ಠಿಯಲ್ಲಿದ್ದರು.