ಹುಬ್ಬಳ್ಳಿ; ಚುನಾವಣಾಧಿಕಾರಿಗಳ ಪರವಾನಗಿ ಇಲ್ಲದ ಹಿನ್ನೆಲೆಯಲ್ಲಿ ರಂಭಾಪುರಿ ಕಲ್ಯಾಣಮಂಟಪದಲ್ಲಿ ಗುರು ವಿರಕ್ತ ಸಾಧು ಸನ್ಯಾಸಿಗಳ ಚಿಂತನ ಮಂಥನ ಸಭೆ ನಡೆಸಲು ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಚುನಾವಣಾಧಿಕಾರಿ, ಪೊಲೀಸ್ ಅಧಿಕಾರಿಗಳು ತಡೆಯೊಡ್ಡಿದ್ದರಿಂದ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನೂರಾರು ಸ್ವಾಮೀಜಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಆರಂಭ ಆಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಬಸವಪ್ರಭು ಹಿರೇಮಠ, ಸಿಪಿಐ ಧರೇಗೌಡ ಸಭೆ ನಡೆಸಲು ಅನುಮತಿ ಪಡೆದಿದ್ದರೆ ತೋರಿಸಿ ಎಂದರು.
ಇದಕ್ಕೆ ನಿನ್ನೆಯಿಂದ ನಾವು ಅನುಮತಿಗೆ ಚುನಾವಣಾಧಿಕಾರಿಗೆ ಪತ್ರ ಬರೆದು ಕೋರಿದ್ದೆ. ಬೆಳಿಗ್ಗೆ ಕೊಡುತ್ತೇವೆ ಎಂದು ಹೇಳಿದವರು ಕೊಟ್ಟಿಲ್ಲ. ಕೊಡದೇ ಇರುವುದು ಅವರ ತಪ್ಪು. ನೂರಾರು ಸ್ವಾಮೀಜಿಗಳು ಬಂದಿದ್ದಾರೆ. ಸಭೆ ನಡೆಸಿಯೇ ತಿರುತ್ತೇವೆ ಎಂದು ದಿಂಗಾಲೇಶ್ವರರು ಪಟ್ಟು ಹಿಡಿದರು.
ಈ ವೇಳೆ ಅಧಿಕಾರಿಗಳ ಕ್ರಮ ಖಂಡಿಸಿದ ಶ್ರೀಗಳು ಮತ್ತು ಇತರ ಸ್ವಾಮೀಜಿಗಳು ಸಭೆ ಮೊಟಕುಗೊಳಿಸಿದರು. ಅನುಮತಿ ನೀಡದೇ ಇರುವ ಚುನಾವಣಾಧಿಕಾರಿಗಳ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸೋಣ ಎಂದು ಚನ್ನಮ್ಮ ವರ್ತುಳದವರೆಗೆ ಪಾದಯಾತ್ರೆ ನಡೆಸಿದರು.