ಬೀಜ, ರಸಗೊಬ್ಬರದಲ್ಲಿ ತೊಂದರೆ ಆದರೆ ನೇರವಾಗಿ ದೂರು ನೀಡಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ:: ಬೀಜ, ರಸಗೊಬ್ಬರ, ವಿಮೆ, ಪರಿಹಾರ, ಕೃಷಿ ಪರಿಕರಗಳ ಸಹಾಯಧನ ಸೇರಿದಂತೆ ಸರಕಾರದ ಎಲ್ಲಾ ಸವಲತ್ತು, ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ. ಬೀಜ, ರಸಗೊಬ್ಬರ ವಿತರಣೆಯಲ್ಲಿ ಸರಕಾರಿ ಇಲಾಖೆ ಅಥವಾ ಸಹಕಾರಿ, ಖಾಸಗಿ ವ್ಯಾಪಾರಸ್ಥರಿಂದ ತೊಂದರೆ ಆದಲ್ಲಿ, ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಅಥವಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ನೀಡಿ. ದೂರುದಾರರ ಮಾಹಿತಿ ಗೌಪ್ಯವಾಗಿಟ್ಟು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತ ಹಿತರಕ್ಷಣೆಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಮುಂಗಾರು ಪೂರ್ವ ಸಿದ್ಧತೆಗಳ ಕುರಿತು ಜಿಲ್ಲೆಯ ರೈತ ಮುಖಂಡರು ಹಾಗೂ ರೈತ ಸಂಘಟನೆಗಳೊಂದಿಗೆ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು ಯಾವುದೇ ಗಾಳಿಸುದ್ದಿಗಳಿಗೆ ಕಿವಿಗೊಡದೆ ಸಮಾಧಾನದಿಂದ ಅಗತ್ಯ ಬೀಜ, ರಸಗೊಬ್ಬರ ಪಡೆಯಬೇಕು. ಸರಕಾರದ ನಿಯಮಾನುಸಾರ ಪ್ರತಿ ರೈತರಿಗೆ ನೀಡಬೇಕಾದ ಬೀಜ, ರಸಗೊಬ್ಬರ ವಿತರಿಸಲು ಜಿಲ್ಲಾಡಳಿತ ಸಿದ್ದವಿದ್ದು, ಈಗಾಗಲೇ ಅಗತ್ಯ ಕ್ರಮವಹಿಸಿದೆ ಎಂದು ಅವರು ಹೇಳಿದರು.
ರೈತರ ಬೇಡಿಕೆ ಅನುಸಾರ ನಾಳೆಯಿಂದ ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರೈತರ ಪಾಳಿ ಮುಗಿಯುವವರೆಗೆ ಬೀಜಗಳನ್ನು ವಿತರಿಸಲಾಗುತ್ತದೆ. ಇದಕ್ಕೆ ಅಗತ್ಯ ವಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಬೇರೆ ಇಲಾಖೆಗಳಿಂದ ನಿಯೋಜಿಸಿ, ಸೂಕ್ತ ಬಂದೋಬಸ್ತ್ ನೀಡಲಾಗುತ್ತದೆ. ಈ ಕುರಿತು ಜಂಟಿ ನಿರ್ದೇಶಕರು ವ್ಯವಸ್ಥಿತ ಕ್ರಮವಹಿಸುತ್ತಾರೆ. ತಡರಾತ್ರಿ ಆದರೂ ಬ್ಯಾಂಕುಗಳು, ರೈತ ಸಂಪರ್ಕ ಕೇಂದ್ರದ ಆರ್ಥಿಕ ಕಾರ್ಯಗಳಿಗೆ ಸಹಕಾರ ನೀಡಬೇಕು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ರೈತ ಸಂಪರ್ಕ ಕೇಂದ್ರಗಳಿರುವ ಬ್ಯಾಂಕ್ ಶಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ರಸಗೊಬ್ಬರ ಮಾರಾಟ ಮಾಡುವ ಸಹಕಾರಿ ಸಂಸ್ಥೆಗಳು, ಖಾಸಗಿ ಆಗ್ರೋ ಕೇಂದ್ರಗಳು, ಚಿಲ್ಲರೆ ಮಾರಾಟಗಾರರು ಅನಗತ್ಯವಾಗಿ ರೈತರಿಗೆ ಗೊಬ್ಬರಕ್ಕೆ ಲಿಂಕ್ ಜಿಂಕ್ ಹೆಸರಿನಲ್ಲಿ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ರಸಗೊಬ್ಬರ ವ್ಯಾಪಾರಿಗಳು ಗುಣಮಟ್ಟ, ಸಮರ್ಪಕ ಮತ್ತು ಸರಕಾರ ನಿಗದಿ ಪಡಿಸಿದ ದರದಲ್ಲಿ ರಸಗೊಬ್ಬರ ವಿತರಿಸುವುದು ಕಡ್ಡಾಯ. ರೈತರಿಗೆ ಅಗತ್ಯ ಇರುವ ರಸಗೊಬ್ಬರ ಮಾತ್ರ ನೀಡಬೇಕು. ಲಿಂಕ್ ಜಿಂಕ್ ಹೆಸರಿನಲ್ಲಿ ರೈತರಿಗೆ ಬೇಡವಾದ ರಸಗೊಬ್ಬರ, ರಾಸಾಯನಿಕ ಖರೀದಿಸಲು ಒತ್ತಾಯಿಸಿದರೆ ಅಥವಾ ರಸಗೊಬ್ಬರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ತಕ್ಷಣ ಅವರ ಲೈಸನ್ಸ್ ರದ್ದುಪಡಿಸಲು ಕೃಷಿ ಇಲಾಖೆಗೆ ನಿರ್ದೇಶನ ನೀಡಿದ್ದೆನೆ, ರೈತರು, ಸಾಮಾನ್ಯರು ಇಂತಹ ದೂರುಗಳಿದಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅಥವಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ನೀಡಬೇಕು. ಬಯಸಿದಲ್ಲಿ ದೂರುದಾರರ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾಡಳಿತ, ಕೃಷಿ ಇಲಾಖೆ ಮೂಲಕ ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ ಸೀಗುವಂತೆ ಪ್ರಾಮಾಣಿಕ ಕಾರ್ಯ ಮಾಡುತ್ತದೆ. ಕ್ರಮತೆಗೆದುಕೊಳ್ಳುವ ಅಧಿಕಾರ ನನಗೆ ಇರುವುದರಿಂದ ನೇರವಾಗಿ ನಿಮ್ಮ ತೊಂದರೆ ತಿಳಿಸಿ, ತಕ್ಷಣ ಕ್ರಮ ವಹಿಸುತ್ತೇನೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಹೇಳಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ ಭದ್ರಣ್ಣನವರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕರಾದ ಜಯಶ್ರೀ ಹಿರೇಮಠ, ಡಾ ಸಂದೀಪ ಆರ್.ಜಿ., ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳು ವಿಮಾ ಕಂಪನಿ ಪ್ರತಿನಿಧಿಗಳು, ಕರ್ನಾಟಕ ಬೀಜ ನಿಗಮ, ಫೆಡರೇಶನ್ ಇಪ್ಕೋ ಕ್ರಿಪ್ಕೋ ಹಾಗೂ ಇತರ ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು ಮತ್ತು ರೈತರು, ರೈತ ಮುಖಂಡರಾದ ಮಲ್ಲಿಕಾರ್ಜುನ ಬಾಳನಗೌಡರ, ಸುಭಾಸಚಂದ್ರ ಪಾಟೀಲ, ರಘುನಾಥ ನಡುವಿನಮನಿ, ಚಂದ್ರಶೇಖರ ಅಂಬಲಿ, ಲೋಕನಾಥ ಹೆಬಸೂರ, ಪುಟ್ಟಣ್ಣವರ, ಸಿದ್ದನಗೌಡ ಪಾಟೀಲ, ಎಚ್.ಆರ್.ಬೂದಿಹಾಳ, ಮೈಲಾರಪ್ಪ ಗಂಗೋಜಿ, ರಾಚಯ್ಯ ಮಠದ, ಪರಶುರಾಮ ಎತ್ತಿನಗುಡ್ಡ, ಮಾಣಿಕ್ಯ ಚಿಲ್ಲೂರ, ಕಸ್ತೂರಿ ಅಕ್ಕಿವಾಟಿ, ಹಜರತಅಲಿ ವಾಲೀಕಾರ, ಕಲ್ಲಪ್ಪ ಒಂಟಿ, ನವೀನ ಡೊಂಕನವರ ಸೇರಿದಂತೆ ವಿವಿಧ ತಾಲೂಕುಗಳ ರೈತ ಪ್ರಮುಖರು, ರಸಗೊಬ್ಬರ ಮಾರಾಟಗಾರರು ಭಾಗವಹಿಸಿದ್ದರು.