ಬರ ಪರಿಹಾರ; ರೈತರ ಆಕ್ರೋಶ
ಸಮಸ್ಯೆಯಾದರೆ ಬಗೆಹರಿಸುವುದಾಗಿ ತಹಶೀಲ್ದಾರ್ ಹೆಗ್ಗಣ್ಣವರ ಭರವಸೆ
ನವಲಗುಂದ ; ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ನೇತೃತ್ವದಲ್ಲಿ ರೈತರು, ಅಧಿಕಾರಿಗಳು ಹಾಗೂ ಬ್ಯಾಂಕ್ ವ್ಯವಸ್ಥಾಪಕರ ಸಭೆ ನಡೆಯಿತು.
ರೈತ ಮುಖಂಡ ಶಂಕರಪ್ಪ ಅಂಬಲಿ ಮಾತನಾಡಿ,
ಸರ್ಕಾರವು, ನವಲಗುಂದ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಎನ್‌ಡಿಆರ್‌ಎಫ್ ನಿಯಮಾನುಸಾರ ಪರಿಹಾರ ವಿತರಣೆ ಮಾಡದೇ, ರೈತ ಸಮುದಾಯಕ್ಕೆ ತಾರತಮ್ಯ ಮಾಡಲಾಗಿದೆ. ತಾಲ್ಲೂಕಿನಲ್ಲಿ ಸುಮಾರು 85,000 ಹೆಕ್ಟೇರ್ ಕೃಷಿ ಪ್ರದೇಶವಿದ್ದು, ಕೇವಲ 40 ಸಾವಿರ ಹೆಕ್ಟೇರ್‌ಗೆ ಪರಿಹಾರ ಬಂದಿದೆ’ ಎಂದು ಆರೋಪಿಸಿದರು.
‘ಬರಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ಸಮೀಕ್ಷೆ ನಡೆಸಿದ್ದಾರೆ. ಸರ್ಕಾರ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಎಲ್ಲ ರೈತರೂ ಬರ ಪರಿಹಾರಕ್ಕೆ ಅರ್ಹರಾಗಿದ್ದು, ಎಲ್ಲರಿಗೂ ಹಣ ಜಮೆ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
:ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮೆ ಆಗುವಲ್ಲಿ ಯಾವುದೇ ತೊಂದರೆಯಾದರೂ ತಹಶೀಲ್ದಾರ್ ಕಚೇರಿ ಸಂಪರ್ಕಿಸಿ. ನಾವೇ ಖುದ್ದಾಗಿ ಅಥವಾ ದೂರವಾಣಿ ಮೂಲಕ ಕರೆ ಮಾಡಿ ಹಣ ನೀಡುವಂತೆ ಹೇಳುತ್ತೇವೆ. ಬಾಕಿ ಉಳಿದಿರುವ ಪರಿಹಾರ ಹಣ ಜಮೆ ಆಗಲು 15 ದಿನ ಬೇಕಾಗುತ್ತದೆ’ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ರೈತರ ಸಮ್ಮುಖದಲ್ಲೇ ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಜೊತೆಗೆ ಚರ್ಚಿಸಲಾಗಿದ್ದು, ಸರ್ಕಾರದ ಆದೇಶದಂತೆ ಪರಿಹಾರದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು’ ಎಂದು ಆದೇಶಿಸಿದರು.
ವಿವಿಧ ರೈತ ಸಂಘಗಳ ಮುಖಂಡರು ಮಾತನಾಡಿ, ‘ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೂ, ರೈತರಿಗೆ ಸರಿಯಾಗಿ ಬರ ಪರಿಹಾರ, ಬೆಳೆ ವಿಮೆ ಬಂದಿಲ್ಲ. ಕೆಲ ರೈತರಿಗಷ್ಟೇ ಬಂದಿದೆ. ರಾಜ್ಯ ಸರ್ಕಾರ ಕೂಡಲೇ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
‘ರೈತರ ಖಾತೆಗೆ ಸಂದಾಯವಾದ ಬೆಳೆ ಪರಿಹಾರ, ಬೆಳೆ ವಿಮೆ, ಪಿಂಚಣಿಯನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು. ಬರಗಾಲದಿಂದ ರೈತರು ತತ್ತರಿಸಿದ್ದು, ದೈನಂದಿನ ಜೀವನ ನಡೆಸುವುದು ಕಷ್ಟವಾಗಿದೆ. ರೈತರು ಬ್ಯಾಂಕಿಗೆ ಬಂದಾಗ ಸಿಬ್ಬಂದಿ ಜವಾಬ್ದಾರಿಯಿಂದ ವರ್ತಿಸಬೇಕು’ ಎಂದರು.
ಬ್ಯಾಂಕ್ ಆಫ್ ಬರೋಡಾ ಶಾಖೆ ವ್ಯವಸ್ಥಾಪಕ ಮಹೇಶ ಗುಜಮಾಗಡಿ ಮಾತನಾಡಿ, ‘ಬರ ಪರಿಹಾರ ಹಣ ಸಾಲಕ್ಕೆ ಜಮೆ ಆಗಿದ್ದಲ್ಲಿ, ಅದನ್ನು ರೈತರಿಗೆ ಮರಳಿಸಲಾಗುವುದು’ ಎಂದು ಹೇಳಿದರು.
ಮಲ್ಲೇಶ್ ಉಪ್ಪಾರ, ಯಲ್ಲಪ್ಪ ದಾಡಿಬಾಯಿ, ಲೋಕನಾಥ ಹೇಬಸೂರ, ಬಸನಗೌಡ ಹುಣಸಿಕಟ್ಟೆ, ರಘುನಾಥರಡ್ಡಿ ನಡುವಿನಮನಿ, ಸಿದ್ದಲಿಂಗಪ್ಪ ಹಳ್ಳದ, ಗೋವಿಂದರೆಡ್ಡಿ ಮೊರಬದ, ಮುರಗೇಪ್ಪ ಪಲ್ಲೆದ ನಿಂಗಪ್ಪ ತೋಟದ, ಬಸಪ್ಪ ಮುಪ್ಪಯ್ಯನವರ, ಎಸ್.ಬಿ. ಪಾಟೀಲ, ನಾಗಪ್ಪ ಸಂಗಟಿ, ಶಿವಪ್ಪ ಸಂಗಳದ, ಸಂಗಪ್ಪ ನೀಡವನಿ ಇದ್ದರು.