ಹುಬ್ಬಳ್ಳಿ: ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ನಗರದ ಎರಡೆತ್ತಿನಮಠದಿಂದ ಮೇಣದಬತ್ತಿ ಹಿಡಿದು ಮೆರವಣಿಗೆ ಮಾಡಲಾಯಿತು.
ದುರ್ಗದಬೈಲ್ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಹು–ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ, ‘ಎರಡೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ಮೂಲಕ ಶೀಘ್ರ ಶಿಕ್ಷೆ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.
ಬಸವೇಶ್ವರ ಕನ್ನಡ ಬಳಗದ ಅಧ್ಯಕ್ಷ ಜಯದೇವಯ್ಯ ಹಿರೇಮಠ ಮಾತನಾಡಿ, ‘ಇಬ್ಬರು ಯುವತಿಯರ ಹತ್ಯೆ ಮಾಡಿದ ಫಯಾಜ್ ಹಾಗೂ ಗಿರೀಶನಿಗೆ ಮರಣದಂಡನೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಅಂಜಲಿ ಅಜ್ಜಿ ಗಂಗಮ್ಮ, ಸಹೋದರಿ ಯಶೋಧಾ, ಗುರುಸಿದ್ದಯ್ಯ ಚೌಕಿಮಠ, ಗುರುಸಿದ್ದಯ್ಯ ಗಾಡಿಮಠ, ಕಳಕಪ್ಪ ನಾಲವಾಡ, ಮಂಜುನಾಥ ಜವಳಿ, ಆನಂದ ಬೋಸ್ಲೆ, ಚೇತನ ಕುಮಾರ ಹಿರೇಮಠ, ಹನುಮಂತ ಬೋಸ್ಲೆ ಸೇರಿದಂತೆ ಎರಡೆತ್ತಿನ ಮಠದ ಸದ್ಭಕ್ತ ಮಂಡಳಿ, ಬಡಿಗೇರ ಓಣಿ ಮಹಿಳಾ ಮಂಡಳ, ವೀರಾಪೂರ ಓಣಿ ಮಹಿಳಾ ಮಂಡಳಾ, ಅಗಸರ ಓಣಿ, ಘಂಟಿಕೇರಿ ಓಣಿ, ಮಂಗಳವಾರ ಪೇಟದ ನಿವಾಸಿಗಳು ಪಾಲ್ಗೊಂಡಿದ್ದರು.