ಮರ ಕತ್ತರಿಸಲು ಅನುಮತಿ ನೀಡದಿರಿ
ಹು-–ಧಾ ನಾಗರಿಕ ಪರಿಸರ ಸಮಿತಿ ಡಿಸಿಎಫ್‌ಗೆ ಮನವಿ
ಮರ ಉಳಿಸಲು ನಾಗರಿಕರ ಆಗ್ರಹ
ಧಾರವಾಡ: ನಗರದಲ್ಲಿ ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕತ್ತರಿಸುವುದು ಹೆಚ್ಚುತ್ತಿದೆ. ರಸ್ತೆಗಳ ಅಭಿವೃದ್ಧಿ, ಇತರ ಕಾಮಗಾರಿ ನಿಟ್ಟಿನಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡಬಾರದು ಎಂದು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯವರು ಧಾರವಾಡದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಡಿ.ಕವರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಸದಸ್ಯರಾದ ವಿಲಾಸ ಕುಲಕರ್ಣಿ. ಐಎಲ್.ಎಲ್.ಪಾಟೀಲ, ಎಸ್. ಎನ್.ಕುಲಕರ್ಣಿ, ಕೆ.ಎಸ್.ಪಾಟೀಲ, ಮಲ್ಲಿಕಾರ್ಜುನ ತರ್ಲಘಟ್ಟ, ಜಗದೀಶ ಗುಡಗೂರ, ಶ್ರೀನಿವಾಸ ಕುಲಕರ್ಣಿ ಮನವಿ ಪತ್ರ ಸಲ್ಲಿಸಿದ್ದಾರೆ.
ಟೋಲ್ ನಾಕಾ ಭಾಗದಿಂದ ನುಗ್ಗಿಕೆರೆ ಪದೇಶದಿಂದ ರಸ್ತೆ ಬದಿ ಅನೇಕ ಮರಗಿಡಗಳನ್ನು ಕತ್ತರಿಸಲು ನಿರ್ಣಯಿಸಲಾಗಿದ ಎಂಬ ಮಾಹಿತಿ ಇದೆ. ಅಭಿವೃದ್ಧಿ ಪಡಿಸುವ ರಸ್ತೆಗಳ ಬದಿಯಲ್ಲಿ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಕೋರಿದ್ಧಾರೆ.
ರಸ್ತೆ ಬದಿ ಮರಗಳ ಕೊಂಬೆಗಳು ಒಣಗಿ, ಜೋತು ಬಿದ್ದು ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದ್ದರೆ ಕೊಂಬೆಗಳನ್ನು ಕತ್ತರಿಸಲು ಪರವಾನಿಗೆ ನೀಡಬೇಕು, ಮರ ಕಡಿಯಬಾರದು. ರಸ್ತೆ ಬದಿ ಇರುವ ಮರಗಿಡಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.