ಪ್ರಹ್ಲಾದ ಜೋಶಿಗೆ ಆಹಾರ ಖಾತೆಯ ಜವಾಬ್ದಾರಿ
ಚರ್ಚೆಗೆ ಗ್ರಾಸವಾದ ಖಾತೆ ಬದಲಾವಣೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ರಚನೆಯಾಗಿದ್ದು, 71 ಸಚಿವರಿಗೂ ಖಾತೆ ಹಂಚಿಕೆಯಾಗಿದೆ. ಈ ಮಧ್ಯೆ ಪ್ರಹ್ಲಾದ ಜೋಶಿಯವರಿಗೆ ಹಂಚಿಕೆಯಾಗಿರುವ ಖಾತೆ ಕುರಿತು ಚರ್ಚೆ ನಡೆಯುತ್ತಿದೆ.
ಕಳೆದ ಬಾರಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಅವರಿಗೆ ಆಹಾರ ಮತ್ತು ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ , ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಜವಾಬ್ದಾರಿ ನೀಡಲಾಗಿದೆ.
ಕಳೆದ ಬಾರಿ ನಿರ್ವಹಿಸಿದ್ದ ಖಾತೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಕೊಟ್ಟ ಖಾತೆಗಳಿಗೆ ನ್ಯಾಯ ಒದಗಿಸಿದ್ದಾರೆ. 2022-23ರಲ್ಲಿ ಸುಮಾರು 893 ಮಿಲಿಯನ್ ಟನ್‌ನಷ್ಟು ಕಲ್ಲಿದ್ದಲು ಉತ್ಪಾದನೆ ಯೊಂದಿಗೆ ಭಾರತ ಕಲ್ಲಿದ್ದಲು ವಿಚಾರದಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕುವಂತೆ ಮಾಡಿದ್ದರು. ಇದು ದೇಶದ ಇತಿಹಾಸದಲ್ಲಿಯೇ ದಾಖಲೆ ಉತ್ಪಾದನೆಯಾಗಿತ್ತು. ಆದರೆ, ಇದೀಗ ಖಾತೆ ಬದಲಾವಣೆ ಮಾಡಿರುವ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ.
ಮೊದಲಿನ ಖಾತೆಯನ್ನೇ ಜೋಶಿಯವರಿಗೆ ನೀಡಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ.
ಎಬಿವಿಪಿ, ಸಂಘ ಮೂಲದಿಂದ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಗುರುತಿಸಿಕೊಂಡ ಪ್ರಹ್ಲಾದ ಜೋಶಿ, ಪಕ್ಷ ಹಾಗೂ ಅಧಿಕಾರ ವಿಚಾರದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತ ಬಂದವರು. ಸತತ ಐದು ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆ ಯಾಗುವ ಮೂಲಕ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದರೆ, ಪ್ರಧಾನಿ ಮೋದಿ ಸಂಪುಟದಲ್ಲಿ ಸತತ ಎರಡನೇ ಬಾರಿ ಸಚಿವರಾಗಿ ಮತ್ತೊಂದು ದಾಖಲೆ ಬರೆದಿದ್ದಾರೆ. ಕೇಂದ್ರಕ್ಕೂ ಹಾಗೂ ರಾಜ್ಯಕ್ಕೂ ಪ್ರಮುಖ ಸಂಪರ್ಕದ ಕೊಂಡಿಯಾಗಿದ್ದಾರೆ.
1998-2003ರವರೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಬಿಜೆಪಿ ಸಂಕಷ್ಟ ಸ್ಥಿತಿಯಲ್ಲಿದ್ದಾಗ 2013-ಖ 2017ರವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಸಮರ್ಪಕವಾಗಿ ನಿಭಾ ಯಿಸಿದ್ದರು. ಬಿ.ಎಸ್.ಯಡಿಯೂರಪ್ಪ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ರಾಜ್ಯದಲ್ಲಿ ಪಕ್ಷ ಮುನ್ನಡೆಸಿದ್ದಲ್ಲದೆ, 2018ರಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವಂತೆ ಮಾಡುವಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದರು.
ಸತತ ಗೆಲುವು:2004-2024ರವರೆಗೆ ಸತತ ಐದು ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. 2019ರಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರು. ಇದೀಗ 2ನೇ ಬಾರಿಗೆ ಸಚಿವರಾಗಿ ಮೋದಿಗೆ ಜತೆಯಾಗಿದ್ದಾರೆ