ಸಾಮೂಹಿಕ ಅತ್ಯಾಚಾರ ಮೂರು ದಶಕ ಬಳಿಕ ಶಿಕ್ಷೆ
ಶಾಜಹಾನಪುರ ; 12 ವರ್ಷ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ ಇಬ್ಬರು ಸಹೋದರರಿಗೆ 30 ವರ್ಷಗಳ ನಂತರ ಶಿಕ್ಷೆ ಪ್ರಕಟವಾಗಿದೆ.
ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗಲು ಕಾರಣರಾಗಿದ್ದರು. ಇಬ್ಬರು ಅಪರಾಧಿಗಳಿಗೆ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಂತ್ರಸ್ತೆಯ ಪುತ್ರ ತನ್ನ ತಂದೆ ಯಾರು ಎಂದು ಪ್ರಶ್ನಿಸಿದಾಗ ಈ ಪ್ರಕರಣವು ಬಯಲಿಗೆ ಬಂದಿತ್ತು. ‘ಗುಡ್ಡು ಹಸನ್ ಮತ್ತು ನಾಕಿ ಹಸನ್ ಎನ್ನುವವರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಘೋಷಿಸಿದ್ದಾರೆ’ ಎಂದು ಸರ್ಕಾರಿ ವಕೀಲ ರಾಜೀವ್ ಅವಸ್ಥಿ ಗುರುವಾರ ತಿಳಿಸಿದ್ದಾರೆ.
ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ 2021ರ ಮಾರ್ಚ್‌ನಲ್ಲಿ ದೂರು ದಾಖಲಾದ ನಂತರ ನಾಕಿ ಮತ್ತು ಗುಡ್ಡು ಸಹೋದರರನ್ನು 2022ರಲ್ಲಿ ಬಂಧಿಸಲಾಗಿತ್ತು. ಸಂತ್ರಸ್ತೆ, ಆಕೆಯ ಪುತ್ರ ಹಾಗೂ ಈ ಸಹೋದರರ ಡಿಎನ್‌ಎ ಪರೀಕ್ಷೆಗೆ ಆದೇಶಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆಯು 1994ರಲ್ಲಿ ಶಾಜಹಾನಪುರದ ಸದರ್ ಬಜಾರ್ ಪ್ರದೇಶದಲ್ಲಿ ತನ್ನ ಸಹೋದರಿ ಮತ್ತು ಬಾವನ ಜೊತೆ ವಾಸಿಸುತ್ತಿದ್ದಳು. ಅದೇ ಪ್ರದೇಶದಲ್ಲಿ ಇದ್ದ ನಾಕಿ ಹಸನ್ ಸಂತ್ರಸ್ತೆಯು ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.
ಆತನ ತಮ್ಮ ಗುಡ್ಡು ಕೂಡ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಆಕೆಯು ಮಗುವಿಗೆ ಜನ್ಮ ನೀಡಿದ್ದಳು. ನಂತರ ಆ ಮಗುವನ್ನು ಸಂಬಂಧಿಕರ ಬಳಿ ಬಿಟ್ಟಿದ್ದಳು. ಆಕೆಗೆ ಮದುವೆ ಆಯಿತು. ಆದರೆ, ಸಾಮೂಹಿಕ ಅತ್ಯಾಚಾರದ ಬಗ್ಗೆ ತಿಳಿದ ಪತಿ ಆಕೆಯನ್ನು ಬಿಟ್ಟುಹೋಗಿದ್ದ.