ಬಡವರ ಕಷ್ಟಕ್ಕೆ ಸ್ಪಂದಿಸುತ್ತಿರುವ ಮಜೇಥಿಯಾ ಫೌಂಡೇಶನ್
ಹುಬ್ಬಳ್ಳಿ; ಕಳೆದ 16 ವರ್ಷಗಳಿಂದ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಜೇಥಿಯಾ ಫೌಂಡೇಶನ್ ಇಂದಿಗೂ ತನ್ನದೇ ಆದ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನ ಮೆಚ್ಚುಗೆ ಗಳಿಸಿದೆ.
ನಗರದಲ್ಲಿ ಗುರುವಾರ ಮಜೇಥಿಯಾ ಫೌಂಡೇಶನ್ ಸಭಾ ಭವನದಲ್ಲಿ ಆರೋಗ್ಯ, ಶಿಕ್ಷಣ, ವಿಶೇಷ ಚೇತನರಿಗೆ ಸೇವಾ ಹಸ್ತ ಸಮಾರಂಭ ಜರಗಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕಿ ಗಾಯತ್ರಿ ಪ್ರಭು ಅವರು ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ಅಸಹಾಯಕ ಸ್ಥಿತಿಯಲ್ಲಿರುವ ಜನರ ಉನ್ನತಿಗಾಗಿ ಮುಖ್ಯ ಗುರಿಯಾಗಿಸಿಕೊಂಡು ಮಜೇಥಿಯಾ ಫೌಂಡೇಶನ್ ಸೇವೆ ಅರ್ಥಪೂರ್ಣವಾಗಿದೆ ಎಂದು ನುಡಿದರು. ಸಮಾಜ ಸೇವಕಿ ಜ್ಯೋತಿ ನಡಕಟ್ಟಿ ಮಾತನಾಡಿ, ಇನ್ನೊಬ್ಬರ ಜೀವನಕ್ಕೆ ನೆರಳಾಗಿ ಬಿದ್ದವರನ್ನು ಎತ್ತುವ ಕಾರ್ಯವು ಮಾನವೀಯ ಸೇವೆಯಾಗಿದೆ, ಮಜೇಥಿಯಾ ಫೌಂಡೇಶನ್ ಎಲ್ಲ ಕ್ಷೇತ್ರದಲ್ಲೂ ಅಪಾರವಾದ ಸೇವೆ ಸಲ್ಲಿಸುತ್ತಿರುವುದರಿಂದ ಸಮಾಜ ಸುಧಾರಣೆ ನಾಂದಿಯಾಗಿದೆ ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಶನ್ ಅಧ್ಯಕ್ಷರಾದ ನಂದಿನಿ ಕಶ್ಯಪ್ ಮಜೇಥಿಯಾ ಮಾತನಾಡಿ, ಮಜೇಥಿಯಾ ಫೌಂಡೇಶನ್ ಸೇವೆಯಲ್ಲಿ ನೂರಾರು ಜನರು ಪ್ರೋತ್ಸಾಹಿಸುತ್ತಿರುವದರಿಂದ ಮಜೇಥಿಯಾ ಫೌಂಡೇಶನ್ ಸಂಸ್ಥೆಯ ಸೇವೆ ದಿನ ದಿನಕ್ಕೆ ಇಮ್ಮಡಿಯಾಗುತ್ತಿದೆ, ಕಷ್ಟದಲ್ಲಿ ಬೆಂದ ಕುಟುಂಬಗಳಿಗೆ ಬೆಳಕಾಗಬೇಕೆಂಬ ಮಜೇಥಿಯಾ ಫೌಂಡೇಶನ್ ಸಂಕಲ್ಪವಾಗಿದೆ ಎಂದು ನುಡಿದರು.
ಸೇವಾಹಸ್ತ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಮಜೇಥಿಯಾ ಫೌಂಡೇಶನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಟ್ರಸ್ಟಿಗಳಾದ H. R. ಪ್ರಹ್ಲಾದರಾವ್, ಅಮೃತಬಾಯ ಪಟೇಲ್, ಸದಾನಂದ ಕಾಮತ, ಕೇವಲ ಲುನಕರ, ನಾಗರಾಜ ನಡಕಟ್ಟಿ, ಶಂಕರ ಕಮಟೆ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸೇವಾ ಹಸ್ತ ಸಮಾರಂಭದಲ್ಲಿ ವಿಶೇಷ ಚೇತನರಿಗೆ, ಬಡ ರೈತ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಪ್ರತಿಭಾ ಪುರಸ್ಕಾರ, ಕೃತಕ ಕಾಲು ವಿತರಣೆ, ಅನಾರೋಗ್ಯದಿಂದ ಬಳಲುತ್ತಿರುವರಿಗೆ ಸಹಾಯ ಸೇವಾ ಹಸ್ತ ಸಮಾರಂಭದಲ್ಲಿ 20 ಜನರಿಗೆ ಅತಿಥಿಗಳು ಚೆಕ್ ವಿತರಿಸಿದರು.
ಮಜೇಥಿಯಾ ಫೌಂಡೇಶನ್ C.E.O ಸುನೀಲಕುಮಾರ ಕುಕನೂರ ಸ್ವಾಗತಿಸಿದರು. ನವೀನ ಮಾಲಿನ ರೋಹನ ಗೊಂದಕರ ವಂದಿಸಿದರು.