ಚರಂಡಿಯಲ್ಲಿ ಚಾಕುವಿಗಾಗಿ ಹುಡುಕಾಟ
ಹುಬ್ಬಳ್ಳಿ; ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶನನ್ನು ಮಹಜರಿಗೆ ಕರೆತಂದ ಅಧಿಕಾರಿಗಳು, ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆಗಾಗಿ ಓಣಿಯ ಚರಂಡಿಗಳಲ್ಲಿ ತ್ಯಾಜ್ಯ ಹೊರತೆಗೆಸಿ, ಲೋಹ ಪತ್ತೆ ಯಂತ್ರದ ಮೂಲಕ ತೀವ್ರ ಶೋಧ ನಡೆಸಿದರು.
ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣಕ್ಕೆ ತೆರಳಿದ ಅಧಿಕಾರಿಗಳು, ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದರು.
ಸಿಐಡಿ ಎಸ್.ಪಿ. ವೆಂಕಟೇಶ್ ನೇತೃತ್ವದ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಲ್ಲಿನ ಜೆಎಂಎಫ್ ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಎಂಟು ದಿನ ತನ್ನ ಕಸ್ಟಡಿಗೆ ಪಡೆದಿದೆ.
ನಗರದ ವೀರಾಪೂರ ಓಣಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆ ಚುರುಕು ಗೊಳಿಸಿರುವ ಸಿಐಡಿ ಅಧಿಕಾರಿಗಳು, ಹತ್ಯೆ ನಡೆದ ಸ್ಥಳಕ್ಕೆ ಶುಕ್ರವಾರ ಆರೋಪಿ ಗಿರೀಶ ಸಾವಂತನನ್ನು ಕರೆತಂದು ಸ್ಥಳ ಮಹಜರು ನಡೆಸಿದರು.
ವೀರಾಪುರ ಓಣಿಯಲ್ಲಿರುವ ಮನೆಯಲ್ಲಿ ಅಂಜಲಿಯನ್ನು ಹತ್ಯೆ ಮಾಡಲಾಗಿತ್ತು. ಆರೋಪಿಯನ್ನು ಅಲ್ಲಿಗೆ ಕರೆದುಕೊಂಡು ಬಂದ ಸಿಐಡಿ ಅಧಿಕಾರಿಗಳು, ಘಟನಾ ಸ್ಥಳ ಹಾಗೂ ಸುತ್ತಲಿನ ಪ್ರದೇಶ ಪರಿಶೀಲಿಸಿದರು.
ಕೊಲೆ ನಡೆದ ಸಂದರ್ಭದ ಬಗ್ಗೆ ಆರೋಪಿಯಿಂದ ಮಾಹಿತಿ ಪಡೆದರು.