ಜೂ.15ರೊಳಗೆ ಬೇಡಿಕೆ ಈಡೇರಿಸಿ
ಹುಬ್ಬಳ್ಳಿ : ವಿವಿಧ ಬೇಡಿಕೆಗಳನ್ನು ಜೂ. 15ರೊಳಗೆ ಇತ್ಯರ್ಥಪಡಿಸಬೇಕು ಇಲ್ಲದಿದ್ದರೆ ಜೂ. 15ರ ಬಳಿಕ ಸಾರಿಗೆ ನಿಗಮಗಳ ನೌಕರರು ರಾಜ್ಯಾದ್ಯಂತ ಚಳವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಡಿ.ಎ. ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಚಾಲಕ, ನಿರ್ವಾಹಕರು | ಅವೈಜ್ಞಾನಿಕವಾಗಿ ಹಾಗೂ ಕಾನೂನುಬಾಹಿರ ಫಾರಮ್-4
ನಿಂದ ಅಸಾಧ್ಯವಾದ ತೊಂದರೆಗೊಳಗಾಗಿರುವುದನ್ನು ಆಡಳಿತ ವರ್ಗದ ಗಮನಕ್ಕೆ ಈಗಾಗಲೇ ತಂದಿದ್ದೇವೆ. ಆದರೂ ಕೂಡ ಆಡಳಿತ ವರ್ಗವು ಈ ವಿಷಯದಲ್ಲಿ ಸಂಪೂರ್ಣವಾಗಿ ಬೇಜವಾಬ್ದಾರಿತನ ತೋರಿಸಿದೆ. ಕೂಡಲೇ ಆಡಳಿತ ವರ್ಗವು ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಬೇಕು ಎಂದರು.
ಮೇ 21, 22 ಹಾಗೂ 23ರಂದು ನಡೆದ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕಸ್ ಫೆಡರೇಷನ್ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯ ನಾಲ್ಕೂ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಒಟ್ಟಾರೆ ಪರಿಸ್ಥಿತಿ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿತು. ಈ ಸಭೆಯು ಸಮಸ್ತ ಸಾರಿಗೆ ನೌಕರರೂ ಶಕ್ತಿ ಮೀರಿ ದುಡಿದು ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ಯಶಸ್ವಿ ಮಾಡಿರುವುದನ್ನು ದಾಖಲಿಸಿ ಅವರನ್ನು ಅಭಿನಂದಿಸಿತು ಎಂದು ಹೇಳಿದರು.
ಶಕ್ತಿ ಯೋಜನೆಯಿಂದ ಚಾಲನಾ ಸಿಬ್ಬಂದಿಗೆ ಸ್ವಲ್ಪ ಮಟ್ಟಿಗೆ ಪ್ರೋತ್ಸಾಹ ಧನ (ಇನ್ಸೆಂಟಿವ್) ಸಿಕ್ಕಿದರೂ ತಾಂತ್ರಿಕ ಸಿಬ್ಬಂದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಆದ್ದರಿಂದ ಈ ಸಿಬ್ಬಂದಿಗೂ ತಕ್ಷಣ ಸೂಕ್ತ ಪ್ರೋತ್ಸಾಹಧನ(ಇನ್ಸೆಂಟಿವ್) ಕೊಡುವ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫೆಡರೇಷನ್ ಉಪಾಧ್ಯಕ್ಷರಾದ ಬಿ.ವಿ.ಕುಲಕರ್ಣಿ, ಪಿ.ಎಸ್. ನಾಯ್ಕ, ಕಾರ್ಯಾಧ್ಯಕ್ಷ ಆರ್.ಎಫ್. ಕವಳಿಕಾಯಿ ಇನ್ನಿತರರಿದ್ದರು.