ಹುಬ್ಬಳ್ಳಿ: ನಗರದ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್ ಬಲೆ ಬೀಳಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡು, ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಇಬ್ಬರು ಮಹಿಳೆ ಸೇರಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮುಲ್ಲಾ ಓಣಿಯ ಜೋಯಾ ಶಬಾನಾ, ತೊರವಿಹಕ್ಕಲದ ಪರ್ವಿನ್ ಬಾನು, ಡಾಕಪ್ಪ ವೃತ್ತದ ಸಯ್ಯದ್, ಹಳೇ ಹುಬ್ಬಳ್ಳಿಯ ತೌಸಿಫ್ ರೆಹಮಾನ್, ಸಯ್ಯದ್ ತೌಸಿಫ್ ಹಾಗೂ ಅಬ್ದುಲ್ ರೆಹಮಾನ್ ಬಂಧಿತ ಆರೋಪಿಗಳು.
ವ್ಯಾಪಾರಿಯೊಬ್ಬರನ್ನು ಪರಿಚಯಿಸಿಕೊಂಡ ಆರೋಪಿ ಜೋಯಾ ಶಬಾನಾ, ಅವರನ್ನು ಉಣಕಲ್ ಕ್ರಾಸ್‌ಗೆ ಕರೆಸಿಕೊಂಡಿದ್ದಾಳೆ. ನಂತರ ರಾಜನಗರದ ಮನೆಗೆ ಕರೆದುಕೊಂಡು ಹೋಗಿ, ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾಳೆ. ನಂತರ ವಿಡಿಯೋ ಇಟ್ಟುಕೊಂಡು ಆರೋಪಿಗಳೆಲ್ಲ ಸೇರಿ ಕೇಳಿದಷ್ಟು ಹಣ ನೀಡದಿದ್ದರೆ, ವೈರಲ್ ಮಾಡುವುದಾಗಿ ಹೆದರಿಸಿದ್ದಾರೆ. ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ವ್ಯಾಪಾರಿಯು ಸೋಮವಾರ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು, ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಆರೋಪಿತರಿಂದ ೫ ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳು, ಎರಡು ದ್ವಿಚಕ್ರ ವಾಹನ, ೯ ಸಾವಿರ ನಗದು ಸೇರಿ ಒಟ್ಟು ೯೩ ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.