ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳುವ ಉಪಾಯ
ಇದ್ದಾಗಲೇ ಪ್ರಾಣ ಸಿಕ್ತು ಮರಣ ಪ್ರಮಾಣ ಪತ್ರ
ನವಲಗುಂದ; ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಜೀವಂತ ಇರುವ ವ್ಯಕ್ತಿಯೇ ಮರಣ ಪ್ರಮಾಣ ಪತ್ರ ಪಡೆದ ಘಟನೆ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ರಾಮಲಿಂಗ ಓಣಿ ನಿವಾಸಿ ಇಮಾಮ್ ಹುಸೇನ್ ಮಕ್ತುಮಸಾಬ್ ಮುಲ್ಲಾನವರ ಮರಣ ಪ್ರಮಾಣ ಪತ್ರ ಪಡೆದಿರುವ ಜೀವಂತ ವ್ಯಕ್ತಿ.
ಇಮಾಮ್‌ಹುಸೇನ್ ಮತ್ತುಮಸಾಬ್ ಮುಲ್ಲಾನವರ ಆ. 21ರಂದು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಪುರಸಭೆಗೆ ಟಪಾಲ್ ಮೂಲಕ ಆ. 27ರಂದು ಅರ್ಜಿ ಸಲ್ಲಿಸಿದ್ದರು. ಜನನ- ಮರಣ ಪತ್ರ ವಿತರಿಸುವ ಅಧಿಕಾರಿ ಆ. 28ರಂದು ಅನುಮೋದನೆ ನೀಡಿ, ಆ. 29ರಂದೇ ಮರಣ ಪ್ರಮಾಣ ಪತ್ರ ವಿತರಿಸಿದ್ದಾರೆ.
ಇದಕ್ಕೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಭೋವಿ, ಆಶಾ ಕಾರ್ಯಕರ್ತೆ ಭಾರತಿ ಹಳೇಮನಿ, ಮೌಲಾಸಾಬ್ ನಲವಡಿ, ಶಂಶಾದಬೇಗಂ ಜಮಖಾನ ಹಾಗೂ ಹಜೇರಸಾಬ್ ಜಮಖಾನ ಅವರು ಇಮಾಮ್ ಹುಸೇನ್ ಮೃತಪಟ್ಟಿರುವುದಕ್ಕೆ ದೃಢೀಕರಿಸಿದ ದಾಖಲೆಗಳಿವೆ. ಇದಕ್ಕೆ ಪೂರಕವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಲಗತ್ತಿಸಲಾಗಿದೆ. ಇವೆಲ್ಲವನ್ನೂ ಪರಿಶೀಲಿಸಿರುವ ಅಧಿಕಾರಿ ಇಮಾಮ್ ಹುಸೇನ್ ಅವರಿಗೆ ಮರಣ ಪ್ರಮಾಣಪತ್ರ ನೀಡಿದ್ದಾರೆ.
ಟಪಾಲ್ ಮೂಲಕ ಬಂದ ಅರ್ಜಿಯನ್ನು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಅಂಗೀಕರಿಸಿದ್ದಾರೆ.
ಸಾಲದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಇಮಾಮ್‌ಹುಸೇನ್ ತನ್ನದೇ ಮರಣ ಪತ್ರ ಪಡೆದಿದ್ದಾರೆ ಎಂಬ ಗುಸುಗುಸು ಮಾತುಗಳು ಕೇಳಿಬರುತ್ತಿವೆ. ತನಿಖೆ ನಡೆದರೆ ಕಾರಣ ಗೊತ್ತಾಗಲಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.