ಹುಬ್ಬಳ್ಳಿ: ಚುನಾವಣಾ ಪ್ರಚಾರದ ನಿಮಿತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇ 1ರಂದು ಹುಬ್ಬಳ್ಳಿಗೆ ನೀಡಲಿರುವ ಭೇಟಿ ಹಲವು ಕೂತುಹಲಕ್ಕೆ ಕಾರಣವಾಗಿದೆ.
ಭಾನುವಾರದ ರ್‍ಯಾಲಿಗಳಲ್ಲಿ ಪ್ರಧಾನಿ ಮೋದಿ ನೇಹಾ ಹಿರೇಮಠ ಕೊಲೆ ಪ್ರಕರಣ ಪ್ರಸ್ತಾಪಿಸಿದ ಬೆನ್ನಲ್ಲೆ ಶಾ ಆಗಮನ ಬೇರೆ ಆಯಾಮ ಪಡೆದುಕೊಂಡಿದೆ.
ಬರ್ಬರವಾಗಿ ಹತ್ಯೆಗೆ ಈಡಾದ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ಅಮಿತ್ ಶಾ ಭೇಟಿ ನೀಡುವ ಸಾಧ್ಯತೆಯೂ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಮುರುಗೇಶ ನಿರಾಣಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಹೇಳಿದ್ದಾರೆ.
ನೇಹಾ ಮನೆಗೆ ಭೇಟಿ ನೀಡಿದ್ದೇ ಆದಲ್ಲಿ, ದೇಶದಲ್ಲಿ ಸಂಚಲನ ಮೂಡಿಸಿರುವ ಕೊಲೆ ಪ್ರಕರಣಕ್ಕೆ ಖಂಡಿತವಾಗಿಯೂ ಬೇರೊಂದು ಆಯಾಮ ಬರಲಿದೆ ಎನ್ನಲಾಗುತ್ತಿದೆ.
ಅಮಿತ್ ಶಾ ನೇಹಾ ಮನೆಗೆ ಹೋದದ್ದೇ ಆದಲ್ಲಿ ಅದನ್ನು ಕೇಂದ್ರ ಗೃಹ ಸಚಿವರ ಭೇಟಿಯಾಗಿಯೇ ನೋಡಬೇಕಾಗುತ್ತದೆ. ಈ ಮಾತನ್ನು ಪಕ್ಷದವರಷ್ಟೇ ಅಲ್ಲ ಅಧಿಕಾರಿಗಳೂ ಖಾಸಗಿಯಾಗಿ ಒಪ್ಪುತ್ತಾರೆ.
ಕೊಲೆಗೆ ಹತ್ತು ಮುಖಗಳು;
“ಕೊಲೆಗೆ ಹತ್ತು ಹಲವು ಮುಖಗಳು ಇರಬಹುದು ಎನ್ನುವ ಮಾತುಗಳು ಬರುತ್ತಿವೆ. ಬಂಧಿತ ಆರೋಪಿ ನುರಿತ ಕೊಲೆಗಾರನಂತೆ ಕೃತ್ಯ ಎಸಗಿದ್ದಾನೆ ಎಂಬುದಾಗಿ ಯುವಾ ಬ್ರಿಗೇಡ್ ಸಂಘಟನೆ ಬಹಿರಂಗವಾಗಿಯೇ ಆಪಾದಿಸಿರುವುದಷ್ಟೇ ವಿಷಯನ್ನು ಕೇಂದ್ರೀಯ ತನಿಖಾ ಏಜೆನ್ಸಿಗೇ ವಹಿಸುವಂತೆ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ’ ಎಂಬ ಅನಿಸಿಕೆ ಕೇಳಿ ಬರುತ್ತಿದೆ.