ಧಾರವಾಡ; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಇದು ರಾವಣ ಸರ್ಕಾರ. ಈ ಸರ್ಕಾರ ಕಿತ್ತುಹಾಕಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದರು.
ನಗರದ ಹುರಕಡ್ಲಿ ಅಜ್ಜ ಕಾನೂನು ಮೈದಾನದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಕಾಂಗ್ರೆಸ್-ಶಿವಸೇನಾ ಸರ್ಕಾರ ಪಲ್ಟಿ ಹೊಡೆದಿದೆ. ಮಹಾರಾಷ್ಟ್ರ ಮಾದರಿ ಇಲ್ಲಿಯೂ ಆಗಬೇಕಿದೆ ಎಂದರು.
೨೦೧೪ಕ್ಕೂ ಮೊದಲು ದೇಶದಲ್ಲಿ ಎಲ್ಲೆಂದರಲ್ಲಿ ಬಾಂಬ್ ಸ್ಫೋಟ ಆಗುತ್ತಿತ್ತು. ಮೋದಿ ಸರ್ಕಾರ ಬಂದ ಬಳಿಕ ಅದೆಲ್ಲವೂ ನಿಂತಿದೆ. ಅಲ್ಲದೇ, ಮೋದಿ ಭಯದಿಂದ ಪಾಕಿಸ್ತಾನವೂ ತಣ್ಣಾಗಿದೆ ಎಂದು ಹೇಳಿದರು.
ಸೂರ್ಯ-ಚಂದ್ರ ಇರುವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ. ಇದೆಲ್ಲವೂ ಕಾಂಗ್ರೆಸಿಗರ ಊಹಾಪೋಹ. ಇದಕ್ಕೆಲ್ಲ ಕ್ಯಾರೆ ಎನ್ನದೆ, ಇದೇ ಮೇ.೭ಕ್ಕೆ ಬಿಜೆಪಿಗೆ ಮತ ನೀಡಿ, ಜೋಶಿ ಗೆಲ್ಲಿಸುವಂತೆ ಕರೆ ನೀಡಿದರು.
ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ತ್ರಿವಣ ಧ್ವಜ ಹಾರಿಸಿದ್ದಾರೆ. ೪ ಬಾರಿ ಗೆಲವು ಸಾಧಿಸಿ, ಕಪ್ಪು ಚುಕ್ಕೆ ಇಲ್ಲದೆ, ಕಲ್ಲಿದ್ದಲು ಖಾತೆ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.
ಮಾಜಿ ಶಾಸಕ ಡಾ.ಮಾರುತಿ ಮೋಳೆ ಮಾತನಾಡಿದರು.
, ಮರಾಠ ಸಮಾಜದ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿಲ್ಲ. ಯಡಿಯೂರಪ್ಪ ನಿಗಮ ಸ್ಥಾಪಿಸಿ, ರೂ.೫೦, ಬಸವರಾಜ ಬೊಮ್ಮಾಯಿ ರೂ.೧೦೦ ಕೋಟಿ ಕೊಟ್ಟಿರುವುದಾಗಿಯೂ ಸ್ಮರಿಸಿದರು.
ಅಭ್ಯರ್ಥಿ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಅಮೃತ ದೇಸಾಯಿ ಸೀಮಾ ಮಸೂತಿ, ಸಂತೋಷ ಚವ್ಹಾಣ, ಉದಯ ಲಾಡ್, ದಶರತ ಕೊಟ್ಕರ, ಮುದಕಪ್ಪ ಯಮೋಜಿ, ಮೋಹನ ರಾಮದುರ್ಗ ಹಾಗೂ ದೇವರಾಜ ಶಹಪೂರ ಇದ್ದರು.