ಹುಬ್ಬಳ್ಳಿ ; ಅಳಗುಂಡಿ ಓಣಿಯಲ್ಲಿನ ಸರ್ ಸಿದ್ದಪ್ಪ ಕಂಬಳಿ ಅವರ ನಿವಾಸಕ್ಕೆ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರಾದ ಈಶ್ವರ ಬಿ.ಖಂಡ್ರೆ ಮತ್ತು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ ಅವರು ಭೇಟಿ ನೀಡಿದರು.
ಬಳಿಕ ಮಾತನಾಡಿದ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು, ಸರ್ ಸಿದ್ದಪ್ಪ ಕಂಬಳಿ ಅವರ ವಿಚಾರಗಳು, ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿವೆ. ಎಲ್ಲರಿಗೂ ಸಮಪಾಲು, ಸಾಮಾಜಿಕ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸಮ ಸಮಾಜ ಮತ್ತು ಎಲ್ಲರಿಗೂ ಒಳ್ಳೆಯದು ಆಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಕರ್ನಾಟಕ ರಾಜ್ಯವನ್ನು ಆದರ್ಶ ಹಾಗೂ ಬಲಿಷ್ಠ ರಾಜ್ಯ ಮಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇವೆ. ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸರ್ ಸಿದ್ದಪ್ಪ ಕಂಬಳಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಸರ್ ಸಿದ್ದಪ್ಪ ಕಂಬಳಿ ಸಾಧನೆಗಳನ್ನು ಯುವಜನರಿಗೆ ತಿಳಿಯ ಪಡಿಸುವ ಕಾರ್ಯಗಳು ಆಗಬೇಕು ಎಂದು ಅವರು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಸಮಾಜದಲ್ಲಿನ ಶೋಷಿತರು, ಬಡವರು, ಮಹಿಳೆಯರಿಗಾಗಿ ಅವರು ಸಲ್ಲಿಸಿದ ಕಾರ್ಯಗಳು ಐತಿಹಾಸಿಕವಾಗಿವೆ. ಎಂದಿಗೂ ಅಮರವಾಗಿರುವ ಕಾರ್ಯಗಳನ್ನು ಅವರು ಮಾಡಿದ್ದಾರೆ. ಅವರ ನಿಷ್ಠೆ, ಪ್ರಾಮಾಣಿಕತೆ, ಸರಳ ಜೀವನ ನಮಗೆ ಮಾದರಿಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಸಹ ಸಾಧನೆಗೈದಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಹೋರಾಟ ಮಾಡಿ, ಇಂದು ದಂತಕಥೆಯಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಾವೆಲ್ಲಾ ಹುಟ್ಟಿರುವುದೇ ಧನ್ಯ. ಇಲ್ಲಿನ ನಿವಾಸದಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರ ಪದವಿ, ಜೀವನ ಸಾಧನೆಗಳನ್ನು ಸಂರಕ್ಷಿಸಿ, ಕಾಪಾಡಿಕೊಂಡು ಹೋಗುತ್ತಿರುವ ಅವರ ಕುಟುಂಬಸ್ಥರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಕುಟುಂಬಸ್ಥರು ಇತರರು ಉಪಸ್ಥಿತರಿದ್ದರು.
*****