ಐಪಿಎಸ್ ಅಧಿಕಾರಿ ತಲೆದಂಡ
ಹುಬ್ಬಳ್ಳಿ : ನಗರದ ವಿದ್ಯಾರ್ಥಿನಿ ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯ ತಲೆದಂಡವಾಗಿದೆ. ಹುಬ್ಬಳ್ಳಿ ಧಾರವಾಡ ನಗರದ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತರಾಗಿರುವ ಐಪಿಎಸ್ ಅಧಿಕಾರಿ ಎಂ.ರಾಜೀವ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.
ಇದೇ ಪ್ರಕರಣದಲ್ಲಿ ಇಬ್ಬರನ್ನು ಅಮಾನತುಪಡಿಸಲಾಗಿದೆ. ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಒಂದೇ ತಿಂಗಳ ಅವಧಿಯೊಳಗೆ ಇಬ್ಬರು ಯುವತಿಯರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಇದೇ ಪ್ರಕರಣದಲ್ಲಿ ಹಾಲಿ ಪೊಲೀಸ್ ಆಯುಕ್ತರಾಗಿರುವ ರೇಣುಕಾ ಸುಕುಮಾರ್ ಅವರನ್ನು ಎತ್ತಂಗಡಿ ಮಾಡಿ ಹೊಸ ಆಯುಕ್ತರನ್ನು ನೇಮಿಸುವ ಸಾಧ್ಯತೆಯಿದೆ.
ನಾಲ್ಕು ದಿನದ ಹಿಂದೆ ಹುಬ್ಬಳ್ಳಿ ಯುವತಿ ಅಂಜಲಿ ಅಂಬಿಗೇರ್ ಳನ್ನು ಮನೆಯಲ್ಲಿ ಭೀಕರವಾಗಿ ಗಿರೀಶ್ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದ. ಈ ಘಟನೆ ಹಿನ್ನೆಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ನಂತರ ಮತ್ತೊಂದು ಘಟನೆ ತಲ್ಲಣ ಸೃಷ್ಟಿಸಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಫಲವಾಗಿರುವ ಆರೋಪದ ಮೇಲೆ ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾನುವಾರ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದಾರೆ.