ತೆರೆಮೇಲೆ ನಟ ಭಯಂಕರ ವಜ್ರಮುನಿ
ಗೆಟಪ್ ನಲ್ಲಿ ಕೋಮಲ್ ಕುಮಾರ್
ಯಲಾಕುನ್ನಿ ಹಳ್ಳಿ ಸೊಗಡಿನ ರಾಜಕೀಯ, ದೇವಸ್ಥಾನದ ಸುತ್ತ ನಡೆಯುವ ಕಥೆ, ಮಂಡ್ಯ ನೇಟಿವಿಟಿ ಸಿನಿಮಾ, ಯಲಾಕುನ್ನಿ ವಜ್ರಮುನಿ ಅವರು ಯಾವಾಗಲೂ ಬಳಸುತ್ತಿದ್ದ ಪದ. ಅವರಿಗೆ ಟ್ರಿಬ್ಯೂಟ್ ಮಾಡಲು ನಮ್ಮ ಚಿತ್ರಕ್ಕೆ ಆ ಶೀರ್ಷಿಕೆ ಇಟ್ಟು, ನಾನೇ ನಿರ್ಮಾಣ ಕೂಡ ಮಾಡಿದ್ದೇನೆ.
ಯಲಾಕುನ್ನಿ ನಮ್ಮ ಬ್ಯಾನರ್ ನ ೯ನೇ ಚಿತ್ರ.
ಈಗ ಏನಾದರೂ ವಿಶೇಷವಾಗಿ ಮಾಡಿದರೆ ಮಾತ್ರ ಜನ ಥೇಟರ್ ಗೆ ಬರೋದು. ಚಿತ್ರದಲ್ಲಿ ಯುಐ ಟೆಕ್ನಾಲಜಿ ಯೂಸ್ ಮಾಡಿದ್ದೇವೆ. ಈಗಾಗಲೇ ಚಿತ್ರದ ೨ ಹಾಡುಗಳು, ಟೀಸರ್ ಹಿಟ್ ಆಗಿದೆ. ನಾನು ನೋಡಿದ ಹಾಗೆ ಮೊದಲಿಂದಲೂ ಈ ಭಾಗದ ಜನ ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಹಾಗಾಗಿ ನಾನು ನಿಮ್ಮಬಳಿ ಬಂದಿದ್ದೇನೆ. ಒಂದೇ ಥರದ ಪಾತ್ರ ಮಾಡಬಾರದು ಅಂತ ಇದರಲ್ಲಿ ಬೇರೆಯದೇ ಕ್ಯಾರೆಕ್ಟರ್ ಮಾಡಿದ್ದೇನೆ. ಮಂಡ್ಯ ಭಾಗದ ಹಳ್ಳಿಯಲ್ಲಿ ನಡೆಯೋ ಕಥೆಯಿದು, ಶ್ರೀರಂಗಪಟ್ಟಣದ ಸುತ್ತ ಮುತ್ತ ಶೂಟಿಂಗ್ ಮಾಡಿದ್ದೇವೆ. ಈಗಾಗಲೇ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ ಎಂದು ಹುಬ್ಬಳ್ಳಿಯಲ್ಲಿ ನಟ ಕೋಮಲ್ ಕುಮಾರ್ ಹೇಳಿದರು.
ಆರಂಭದಲ್ಲಿ ೪೫ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ್ದೇನೆ. ಹುಬ್ಬಳ್ಳಿಯಲ್ಲೇ ನಮ್ಮ ಆಫೀಸ್ ಕೂಡ ಇತ್ತು. ಅಣ್ಣನ ಸಲಹೆಯಂತೆ ೫ ವರ್ಷ ಚಿತ್ರರಂಗದಿಂದ ದೂರ ಇದ್ದೆ. ತಮಿಳಲ್ಲೂ ಒಂದು ಸಿನಿಮಾ ಮಾಡಿದ್ದೇನೆ. ಅಲ್ಲಿಂದ ಆಫರ್ ಬರ್ತಿದೆ. ಆದರೆ ನನಗೆ ಕನ್ನಡದಲ್ಲೇ ಇರಬೇಕೆಂಬ ಆಸೆಯಿದೆ ಎಂದೂ ಅವರು ತಿಳಿಸಿದರು.
ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಅವರು ನಿರ್ಮಿಸಿರುವ, N R ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕನಾಗಿ ನಟಿಸಿರುವ “ಯಲಾಕುನ್ನಿ” ಚಿತ್ರ ಅ 25 ರ ಶುಕ್ರವಾರ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಹಾಗೂ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ನಿರ್ದೇಶಕ ಪ್ರದೀಪ್ ನನಗೆ ಈ ಕಥೆ ಹೇಳಿದಾಗ ಇಂಥ ಪಾತ್ರ ಮಾಡಲು ನನ್ನ ಕೈಲಿ ಆಗುತ್ತಾ ಅಂತ ಅನುಮಾನವಿತ್ತು. ಆದರೆ ಅವರು ಬಿಡದೆ ನೀವು ಮಾಡುತ್ತೀರಾ ಅಂತ ಒಪ್ಪಿಸಿ ಪಾತ್ರ ಮಾಡಿಸಿದ್ದಾರೆ. ಮೊದಲಬಾರಿಗೆ ವಜ್ರಮುನಿ ಅವರ ಗೆಟಪ್ ಹಾಕಿಕೊಂಡು ಕನ್ನಡಿ ಮುಂದೆ ನಿಂತಾಗ ನನಗೆ ನಾನು ಕಾಣಲಿಲ್ಲ. ವಜ್ರಮುನಿ ಅವರೇ ಕಂಡರು. ಅವರ ಆಶೀರ್ವಾದದಿಂದ ನನಗೆ ಈ ಪಾತ್ರ ಮಾಡಲು ಸಾಧ್ಯವಾಯಿತು. ನನ್ನ ಪಾತ್ರಕ್ಕೆ ಎರಡು ಶೇಡ್ ಇರುತ್ತದೆ. ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಕೂಡ ಈ ಚಿತ್ರದ ನನ್ನ ಬಾಲ್ಯದ ಪಾತ್ರ ಮಾಡಿದ್ದಾರೆ. ನಿಸರ್ಗ ಅಪ್ಪಣ್ಣ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಅಣ್ಣನ ಮಗ ಯತಿರಾಜ್, ಜಯಸಿಂಹ ಮುಸುರಿ, ಮಯೂರ್ ಪಟೇಲ್, ಸಾಧುಕೋಕಿಲ, ದತ್ತಣ್ಣ, ಮಿತ್ರ, ತಬಲ ನಾಣಿ, ಶಿವರಾಜ್ ಕೆ.ಆರ್ ಪೇಟೆ, ಮಾನಸಿ ಸುಧೀರ್, ಸುಮನ್ ನಗರಕರ್ ಹೀಗೆ ಸಾಕಷ್ಟು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಜಗ್ಗೇಶ್ ಅವರ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್, ಡಿಐ ಕಾರ್ಯ ಮಾಡಿದ್ದೇವೆ. ನಿಮ್ಮ ಬೆಂಬಲ ನಮಗೆ ಬೇಕು ಎಂದರು.
ಧರ್ಮವಿಶ್ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿವೆ, ಮೂರು ಹಾಡುಗಳಿಗೆ ನಿರ್ದೇಶಕ ಪ್ರದೀಪ್, ಹಾಗೂ ಒಂದು ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಆಂತೋಣಿ ದಾಸ್, ಅನಿರುಧ್ದ್ ಶಾಸ್ತ್ರಿ, ನವೀನ್ ಸಜ್ಜು, ಶಶಾಂಕ್ ಶೇಷಗಿರಿ ದನಿಯಾಗಿದ್ದಾರೆ. ಹಾಲೇಶ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಹಾಗೂ ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನ “ಯಲಾಕುನ್ನಿ” ಚಿತ್ರಕ್ಕಿದೆ.