22ಕ್ಕೆ ಪಂಚಮಸಾಲಿ ವಕೀಲರ ಸಮಾವೇಶ
ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಸೆ.22ರಂದು ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್‌ನ ಪ್ರಥಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಗಾಂಧಿ ಭವನದಲ್ಲಿ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಈ ಸಂಬಂಧ ವಿಜಯಪುರ, ಕೊಪ್ಪಳ, ಗದಗ, ಹಾವೇರಿ, ಶಿವಮೊಗ್ಗ, ಬಾಗಲಕೋಟ ಇನ್ನಿತರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವವೀಲರನ್ನು ಸಂಘಟಿಸಲಾಗುತ್ತಿದೆ ಎಂದರು.
2023ರ ಡಿಸೆಂಬರ್‌ನಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ
ಮಾಡಿದಾಗ, ಈ ವಿಚಾರದಲ್ಲಿ ಕಾನೂನು ತಜ್ಞರ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಕಾನೂನು ತಜ್ಞರ ಸಭೆ ನಡೆಸಿರುವ ಅಥವಾ ಮುಂದೆ ನಡೆಸುವ ಬಗ್ಗೆ ನಮಗೆ ಉತ್ತರ ಸಿಗಬೇಕಿದೆ. ಧರಣಿ ವೇಳೆ ಸರ್ಕಾರದಿಂದ ಈ ಕುರಿತು ಲಿಖಿತ ಉತ್ತರ ಬಯಸುತ್ತೇವೆ. ಡಿಸೆಂಬರ್‌ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಹಿರಿಯ ವಕೀಲರಾದ ಶಂಕರಗೌಡ ನಾಗನಗೌಡರ, ಚಂದ್ರಶೇಖರ ನೇಗಿನಹಾಳ, ಧಾರವಾಡ ಜಿಲ್ಲಾ ಪಂಚಮಸಾಲಿ ಸಮಾಜದ ಮಾಧ್ಯಮ ವಕ್ತಾರ ಜಿ.ಜಿ. ದ್ಯಾವನಗೌಡ್ರ, ಶಶಿಶೇಖರ ಡಂಗನವರ, ರಾಜು ಕೊಟಗಿ, ವೈ.ಯು. ಮುದಿಗೌಡರ, ಜಿ.ಎಫ್. ಸಂಕನ್ನವರ, ಶಶಿಧರ ಕೋಟಗಿ, ಪ್ರಕಾಶ ಭಾವಿಕಟ್ಟಿ, ಚಂದ್ರಶೇಖರ ಮೆಣಸಿನಕಾಯಿ, ಅನಿತಾ ಪಾಟೀಲ, ರೇಣುಕಾ ಹೊಂವಾಡ ಇತರರಿದ್ದರು.