ತ್ರಿವಿಧ ಕಾಯಕಕ್ಕೆ ಕಾಯಕಲ್ಪ ನೀಡಿದ ಕಾಯಕಯೋಗಿ
ಶ್ರೀ ಶರಣ ನುಲಿ ಚಂದಯ್ಯ
ನುಡಿದ ಮಾತಿಂಗೆ ತಡಬಡ ಬಂದಲ್ಲಿ
ನುಡಿದ ಭಾಷೆಗೆ ಭಂಗ ನೋಡಾ
ಹಿಡಿದ ಕುಳಕ್ಕೆ ಹಾನಿ ಬಂದಲ್ಲಿ
ಒಡಲನಿರಿಸುವುದೆ ಭಂಗ ನೋಡಯ್ಯಾ
ಇದು ಕಾರಣ ನಡೆ, ನುಡಿ ಶುದ್ಧವಿಲ್ಲದಿದ್ದಡೆ
ಚಂದೇಶ್ವರ ಲಿಂಗವಾದರೂ ಸಪ್ಪರೊಳಗೊಳ್ಳ
ಕಾಣಾ ಮಡಿವಾಳಯ್ಯ .
ಬಸವಣ್ಣನವರ ಅನುಭವ ಮಂಟಪದಲ್ಲಿ ಅಸಂಖ್ಯಾತ ಶರಣ ಚೇತನಗಳಲ್ಲಿ ನುಲಿಯ ಚಂದಯ್ಯನವರು ಒಬ್ಬರು. ಕಾಯಕ ಶರಣರಲ್ಲಿ ಅತ್ಯಂತ ಶ್ರೇಷ್ಠರೆನಿಸಿ ತ್ರಿವಿಧ ಕಾಯಕಕ್ಕೆ ಕಾಯಕಲ್ಪ ನೀಡಿದ ಕಾಯಕಯೋಗಿ, ಈಗಿನ ವಿಜಯಪುರ ಜಿಲ್ಲೆಯ ’ಶಿವಣಗಿ.’ ಎಂಬ ಗ್ರಾಮದಲ್ಲಿ ಜನಿಸಿ, ಕಾಯಕವನ್ನು ಕೈಲಾಸವನ್ನಾಗಿ ಮಾಡಿಕೊಂಡು ಕಾಯಕ ದಾಸೋಹದಲ್ಲಿ ನಿರತನಾಗಿರುವುದೇ ಕೈಲಾಸವೆಂದು ಬಗೆದು ದಿನನಿತ್ಯ ಹಗ್ಗ, ಕಣ್ಣೆಯ ತಯಾರಿಸಿ ಮಾರಿ ಬಂದ ಹಣದಿಂದ ದಾಸೋಹ ಕಾಯಕದಲ್ಲಿ ನಿರತರಾಗಿ ಸಂತೃಪ್ತಿ ಜೀವನ ಕಂಡರು.
ಇವರ ಪ್ರತಿದಿನದ ಕಾಯಕ ಯಥಾ ಪ್ರಕಾರ ಸಾಗುತ್ತಿರುವ ಸಂದರ್ಭದಲ್ಲಿ ಒಂದು ದಿನ ಹುಲ್ಲು ಕೊಯ್ಯುವಾಗ ತಮ್ಮ ಇಷ್ಟಲಿಂಗ ಜಾರಿ ಬಿತ್ತೆಂದೂ, ಅದನ್ನು ಗಮನಿಸಿದ ಚಂದಯ್ಯನವರು ಹಾಗೆಯೇ ಹೊರಟರು. ಆಗ ಲಿಂಗಚೈತನ ಮಾನವ ಆಕಾರ ಹೊಂದಿ ಬಂದು ಚಂದಯ್ಯ ನಾನು ಬರುತ್ತೇನೆ, ಚಂದಯ್ಯ ನಾನು ಬರುತ್ತೇನೆ ಎಂದು ಎಷ್ಟು ಗೋಗರೆದರೂ ಚಂದಯ್ಯ ತಿರುಗಿ ನೋಡದೆ ಹೇಳುತ್ತಾನೆ, ಮೊದಲು ಬಿಟ್ಟು ಹೋಗಿ ಈಗ ಬರುವೆನೆಂದರೆ ಅದು ಬೇಡ ಇದಕ್ಕೆ ನಾನು ಒಪ್ಪುವುದಿಲ್ಲ ಎಂದಾಗ ಈ ಕಲಹ ಮಡಿವಾಳ ಮಾಚೀದೇವರ ಹತ್ತಿರ ಹೋದಾಗ ಇವರಿಬ್ಬರ ಮಾತುಗಳನ್ನು ಆಲಿಸಿದ ನಂತರ ಇವರಲ್ಲಿ ಲಿಂಗಯ್ಯನವರದೆ ತಪ್ಪು ಅಂದಾಗ ತಪ್ಪೊಪ್ಪಿಕೊಂಡ ಅವರಿಗೆ ಚಂದಯ್ಯನವರು ಅಗ್ಗದ ಬೆಲೆಗೆ ಹಗ್ಗ, ಕಣ್ಣೆಯನ್ನು ಮಾರಿಕೊಂಡು ಬರಬೇಕೆಂದು ಹೇಳಿದಾಗ ಅದಕ್ಕೊಪ್ಪಿ ಮಾರಲು ಹೊರಟರು, ದೇವರಿಗೆ ಕೆಲಸಕೊಟ್ಟ ದಾಸೋಹ ಶ್ರೇಷ್ಠ ನಿಷ್ಠ ಯಾರಾದರೂ ಇದ್ದರೆ ಅವರೇ ಚಂದಯ್ಯನವರು.
ಹೀಗೆ ಲಿಂಗಯ್ಯ ಹಗ್ಗ, ಕಣ್ಣೆಯನ್ನು ಮಾರಿ ಚಂದಯ್ಯನಿಗೆ ಕೊಟ್ಟಾಗ ಹೆಚ್ಚಿನ ಹಣಕ್ಕೆ ಮಾರಿರುವುದು ಗೊತ್ತಾಗಿ ಲಿಂಗಯ್ಯನಿಂದ ಪದೇ ಪದೇ ತಪ್ಪುಗಳನ್ನು ಮಾಡುತ್ತಿರುವುದರಿಂದ ನಾನು ಲಿಂಗವನ್ನು ಧರಿಸುವುದಿಲ್ಲ ಎಂದು ಹಠ ಹಿಡಿದಾಗ ಮಡಿವಾಳಯ್ಯನವರ ಸಂಧಾನ ವಿಫಲವಾಗಿ ಇವರಿಬ್ಬರನ್ನು ಅನುಭವ ಮಂಟಪಕ್ಕೆ ಕರೆತಂದು ಅಲ್ಲಮಪ್ರಭು, ಬಸವರಾಜ ದೇವರು ಮೊದಲುಗೊಂಡು ಸರ್ವ ಶರಣರ ಸಮಕ್ಷಮದಲ್ಲಿ ಚಂದಯ್ಯ-ಲಿಂಗಯ್ಯರಲ್ಲಿ ಉಂಟಾದ ಕಲಹ ಕುರಿತು ಅನುಭಾವದ ಪರಾಮರ್ಶೆ ನಡೆದು ಅಂತಿಮವಾಗಿ ಸರ್ವ ಶರಣರ ಒಮ್ಮತದ ಅಭಿಪ್ರಾಯ ಶ್ರೀ ಗುರುಕರುಣ ಲಿಂಗ ; ಲಿಂಗ ನಿಜವೇ ’ಜಂಗಮ’ ಇಂತು ಇದು ಬಹಿರಂಗದ ವರ್ತನೆ ಇನ್ನು ಅಂತರಂಗದ ಸುಜ್ಞಾನವೆ ಜಂಗಮ, ಆ ಜಂಗಮ ನಡೆದ ಸತ್ಕ್ರಿಯೆ ’ಲಿಂಗ’ ಈ ಉಭಯ ಏಕತ್ವ ಸಿದ್ಧಿ ಗುರು; ಇದು ಕಾರಣ ಅಂಗತ್ರಯದಲ್ಲಿ ಲಿಂಗತ್ರಯ ಸಂಬಂಧವಾದಲ್ಲಿ ಜಂಗಮ ದಾಸೋಹ.
ಜಂಗಮ ದಾಸೋಹವಿಲ್ಲದೆಡೆ ಲಿಂಗ ತೃಪ್ತಿ ಇಲ್ಲ. ಅಂಗದ ಮೇಲೆ ’ಲಿಂಗವಿಲ್ಲದಿರ್ದಡೆ’ ಆ ಜಂಗಮ ಸೇವೆ ಕೈಕೊಳ. ಅದು ಕಾರಣ ಒಂದು ಬಿಟ್ಟು ಒಂದರಲ್ಲಿ ನಿಂತರೆ ಅಂಗವಿಲ್ಲದ ಆತ್ಮ, ಶಕ್ತಿ ಇಲ್ಲದ ಶಿವನಂತೆ, ದೀಪವಿಲ್ಲದ ಪ್ರಕಾಶದಂತೆ. ಒಂದಂಗ ಶೂನ್ಯವಾಗಿ ಭಕ್ತಿಯುಂಟೆ? ಅವಯವಹೀನನು ಕಾಯಪಟ್ಟಕ್ಕೆ ಸಲ್ಲುವನೆ? ಇದು ದೈವತ್ಸಕ್ಕೆ ಸಲ್ಲದು. ನಮ್ಮ ಕೂಡಲ ಚೆನ್ನಸಂಗಯ್ಯನಲ್ಲಿ ತ್ರಿವಿಧ ಸನ್ಮತವೆ ಚರಸೇವೆಯಯ್ಯ ಚಂದಯ್ಯ ಪ್ರಭುವೆ ಮತ್ತು ಜಂಗಮವೇ ಪರವೆಂದರಿದಡೇನು? ಆ ಜಂಗಮದಂಗವಲ್ಲವೆ ಲಿಂಗ? ಆ ಲಿಂಗ ಚೈತನ್ಯದರಿವೆಲ್ಲವು ಜಂಗಮವಲ್ಲವೆ? ಅಂಗವಿಲ್ಲದ ಜೀವ, ಆತ್ಮನಿಲ್ಲದಂಗಕ್ಕೆ ಸರ್ವಭೋಗದ ಸುಖ ಉಂಟೆ? ಮಣ್ಣೆಲ್ಲದ ಮರನುಂಟೆ? ಮರನಿಲ್ಲದ ಹಣ್ಣುಂಟೆ? ಹಣ್ಣಿಲ್ಲದ ಸ್ವಾದವುಂಟೆ? ಹಿಂಗಿರುವುದಕ್ಕೆ ಕ್ರಮ ಅಂಗವೆ ಮಣ್ಣು ಲಿಂಗವೆ ಮರನು, ಫಲವೆ ಜಂಗಮ, ರುಚಿಯ ಪ್ರಸಾದ. ಇದು ಕಾರಣ ಕೂಡಲ ಚೆನ್ನಸಂಗಯ್ಯನಲ್ಲಿ ಸಾಕಾರ ಲಿಂಗದ ಜಂಗಮದಂಗವಯ್ಯಾ ಪ್ರಭುವೆ ಇದಕ್ಕೆ ಚಂದಯ್ಯ ಇಷ್ಟಲಿಂಗ ಧರಿಸಲು ಒಪ್ಪಿ ಸರ್ವ ಶರಣರ ಸಂಗದಿಂದ ಶ್ರದ್ಧೆ-ನಿಷ್ಠೆ ಒಲಿದು ಸರ್ವರಿಗೂ ಶರಣೆಂದರು ಒಂದೇ ಕಾಯಕದಲ್ಲಿ ನಿರತರಾಗದೇ ವಾದ್ಯನುಡಿಸಿ, ಗಾಯನಮಾಡಿ ಬಾಜಾಭಜಂತ್ರಿಗಳಾಗಿ ಎಂದು ತ್ರಿವಿಧ ಕಾಯಕದ ಬಗ್ಗೆ ಹೇಳಿದ ಅವರ ಮಾತಿನ ಪರಿಯಲ್ಲಿ ಬರಗಾಲ ಬಂದಾಗ ಹುಲ್ಲು ಸಿಗುವುದಿಲ್ಲ ಆಗ ನಿಮ್ಮ ಕಾಯಕ ನಿಲ್ಲಬಾರದೆಂಬ ಚಂದಯ್ಯನವರ ಸಂದೇಶ ಇಂದಿಗೂ ಜೀವಂತ.
ಕಾಯಕ ನಿಷ್ಠೆಯ ಜೊತೆ ವಚನ ಸಾಹಿತ್ಯ, ಧರ್ಮ ಪ್ರಚಾರದ ಹೊಣೆ ಹೊತ್ತು ಚಂದಯ್ಯನವರು ತಮ್ಮ ಸಂಚಾರ ಕಾಲದಲ್ಲಿ ಶರಣ ತತ್ವ ಪ್ರಸಾರ ಮಾಡುತ್ತಾ, ಮಾಡುತ್ತಾ ಸಾಗುತ್ತಿರುವಾಗ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ನುಲೇನೂರಿಗೆ ಬರುತ್ತಾರೆ. ಅಲ್ಲಿಯೇ ಅವರು ಅಂತ್ಯ ಕಾಲದವರೆಗೂ ತಂಗಿದ್ದು ಲಿಂಗಲೀಲೆ ಆನಂದದಲ್ಲಿ ಉರಿ ಕರ್ಪೂರವನುಂಡಂತೆ, ಕ್ಷೀರದಲ್ಲಿ ಕ್ಷೀರ ಬೆರತಂತೆ, ಮಹಾಬಯಲಲ್ಲಿ ಬಯಲು ಬೆರೆತಂತೆ ಚಂದಯ್ಯನವರು ತಮ್ಮ ಇಷ್ಟಲಿಂಗ ಚಂದೇಶ್ವರ ಲಿಂಗದಲ್ಲಿ ಒಂದಾದರು ಎಂಬ ಪ್ರತೀತಿ. ನುಲೇನೂರಿನಲ್ಲಿ ಚಂದಯ್ಯನವರ ಸಮಾಧಿ ಇದ್ದು ಕೊರಮ, ಕೊರಚ, ಭಜಂತ್ರಿ ಸಮಾಜದ ಬಂಧುಗಳು ಅವರ ಉತ್ಸವವನ್ನು ಮಾಡುತ್ತಾ ಬಂದಿದ್ದು ಅವರ ಕುಲಗುರುವಾದ ಚಂದಯ್ಯನವರ ಕುರಿತು ಸಾಕಷ್ಟು ಅಧ್ಯಯನ ನಡೆಯಬೇಕಿದೆ.
ಸರಕಾರ ಇದರ ಬಗ್ಗೆ ಆದಷ್ಟು ಬೇಗ ಮುತುವರ್ಜಿ ವಹಿಸಿ ಕಾಯಕ ನಿಷ್ಠೆ, ದಾಸೋಹ ಶ್ರೇಷ್ಠ, ತ್ರಿವಿಧ ಕಾಯಕಯೋಗಿಯ ನಿಜವಾದ ಅಮೃತಮಯ ಸಂದೇಶವನ್ನು ಮಾನವ ಕುಲಕೋಟಿ ಸ್ಮರಿಸುವಂತೆ ಕಾಳಜಿ ವಹಿಸಬೇಕಾಗಿದೆ ಎಂಬುದು ಸಮುದಾಯದ ಕಳಕಳಿಯ ನಿವೇದನೆ.
♦ಡಾ. ಹುಚ್ಚಪ್ಪ.ಬ.ಕೊರವರ (ಕಿತ್ತಲಿ), ಮುಖ್ಯ ಶಿಕ್ಷಕರು, ಹುಬ್ಬಳ್ಳಿ