ಕಲಘಟಗಿ ಕಸಾಪ ಅಧ್ಯಕ್ಷ ಸ್ಥಾನ : ತ್ರಿಕೋನ ಸ್ಪರ್ಧೆ
ಕಲಘಟಗಿ : ಕಸಾಪ ತಾಲೂಕಾಧ್ಯಕ್ಷರ ಅವಧಿ ಮುಗಿದು ಈಗಾಗಲೇ ತಿಂಗಳುಗಳು ಕಳೆದರೂ ಇನ್ನೂ ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್ ತಿಂಗಳ 23 ರಂದು ಜಿಲ್ಲಾಧ್ಯಕ್ಷರಾದ ಲಿಂಗರಾಜ ಅಂಗಡಿರವರು ಸ್ಥಳೀಯ ಹನ್ನೆರಡು ಮಠದಲ್ಲಿ ಸಭೆ ನಡೆಸಿದರು. ಆದರೆ ಸರ್ವಾನುಮತದ ಅಭ್ಯರ್ಥಿ ಆಯ್ಕಯಾಗದೇ ಕಗ್ಗಂಟಾಗಿ ಪರಿಣಮಿಸಿದೆ.
ತಾಲೂಕಾಧ್ಯಕ್ಷರ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ; ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಿದ್ದು, ಮೂರು ಜನ ಆಕಾಂಕ್ಷಿಗಳು ಕನ್ನಡಮ್ಮನ ಸೇವೆ ಮಾಡಲು ಬಯಸುತ್ತಿದ್ದಾರೆ. ಹಿರಿಯ ನಾಟಕ ಕಲಾವಿದರು ಹಾಗೂ ಹಾಲಿ ಕಸಾಪ ಸಮಿತಿಯ ಗೌರವ ಕಾರ್ಯದರ್ಶಿ ಪರಮಾನಂದ ಒಡೆಯರರವರು ಆಕಾಂಕ್ಷಿಯಾಗಿದ್ದು, ಕಳೆದ ಹದಿನೈದು ವರ್ಷಗಳಿಂದ ಕಸಾಪದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪತ್ರಕರ್ತ,ನ್ಯಾಯವಾದಿ ಹಾಗೂ ಸಂಘಟನಾಕಾರರಾದ ರಮೇಶ ಸೋಲಾರಗೊಪ್ಪ ಮತ್ತೋರ್ವ ಆಕಾಂಕ್ಷಿಯಾಗಿದ್ದು ತಾಲೂಕು ಕಸಾಪ ಸಮಿತಿಯಲ್ಲಿ ಸಕ್ರಿಯವಾಗಿದ್ದಾರೆ. ಉದ್ದಿಮೆದಾರರಾದ ವೀರಣ್ಣ ಕುಬಸದ ಅವರು ಕೂಡ ಈ ಬಾರಿ ತಾಲೂಕಾಧ್ಯಕ್ಷರ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈಗಾಗಲೇ ಹಾಲಿ ಅಧ್ಯಕ್ಷರ ಅವಧಿ ಮುಗಿದಿದ್ದು, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ, ಕನ್ನಡಪರ ಕಾರ್ಯಕ್ರಮಗಳು, ಕವಿಗೋಷ್ಠಿ, ಉಪನ್ಯಾಸ ಜರುಗಲು ಅನುಕೂಲವಾಗುತ್ತದೆ ಎಂಬುದು ಸಾಹಿತ್ಯಾಸಕ್ತರ ಆಶಯವಾಗಿದೆ.