ಹುಬ್ಬಳ್ಳಿ:ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಮತದಾನ ಮಾಡಿ ಶಾಹಿ ತೋರಿಸಿದವರಿಗೆ ಫ್ರೀ ಐಸ್ ಕ್ರೀಂ ನೀಡಲು ಹುಬ್ಬಳ್ಳಿಯ ಇಬ್ಬರು ನವೋದ್ಯಮಿಗಳು ಮುಂದಾಗಿದ್ದಾರೆ.
ರಾಜ್ಯದ್ಯಂತ ಚುನಾವಣೆಯ ಸಂದರ್ಭದಲ್ಲಿ ಮತದಾನ ಇಳಿಕೆಯಾಗುತ್ತಿರುವುದನ್ನು ಮನಗಂಡು ಮತದಾನ ಹೆಚ್ಚಿಸಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಗ್ರಾಮೀಣ ಭಾಗಕ್ಕಿಂತ ಪ್ರಜ್ಞಾವಂತರು ನೆಲೆಸಿರುವ ನಗರಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತಿವೆ. ಮೊದಲ ಹಂತವಾಗಿ ಬೆಂಗಳೂರು ಉತ್ತರ ಹಾಗು ಗ್ರಾಮೀಣ ಲೋಕಸಭಾ ಚುನಾವಣೆ ಮತದಾನವೇ ಇದಕ್ಕೆ ಸಾಕ್ಷಿ. ಇದೇ ನಿರಾಸಕ್ತಿ ಹುಬ್ಬಳ್ಳಿಯಲ್ಲಿ ಕಾಣದಿರಲಿ ಎಂಬ ಕಾರಣಕ್ಕೆ ಮತದಾನ ಖಚಿತ, ಐಸ್ ಕ್ರೀಂ ಉಚಿತ ಎಂಬ ಅಭಿಯಾನಕ್ಕೆ ಕೈ ಹಾಕಿದ್ದಾರೆ.
ಡೈರಿಸ್ ಐಸ್ ಕ್ರೀಮ್‌ನ ಅಕ್ಷಯ ದಾನಕಶಿರೂರ ಹಾಗೂ ಅಕ್ಷಯ ಸರಾಫ ಇಂತಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ನವೋದ್ಯಮಿಗಳು.
10 ಸಾವಿರ ಐಸ್ ಕ್ರೀಮ್:
ಹುಬ್ಬಳ್ಳಿ ನಗರದ ಅಕ್ಷಯ ಕಾಲೋನಿ ಹಾಗೂ ಕೇಶ್ವಾಪುರದಲ್ಲಿನ ಡೈರಿಸ್ ಐಸ್ ಕ್ರೀಮ್ ಮಳಿಗೆಯಲ್ಲಿ ಮೇ 7 ರಂದು ಬೆಳಿಗ್ಗೆ 11ಗಂಟೆಗೆಯಿಂದ ರಾತ್ರಿ 11 ಗಂಟೆವರೆಗೂ ಐಸ್ ಕ್ರೀಂ ವಿತರಿಸಲಾಗುತ್ತದೆ. ಮತದಾನ ಮಾಡಿ ಬಂದ ಪ್ರಜೆಗಳು ಶಾಹಿ ತೋರಿಸಿದರೆ ಉಚಿತವಾಗಿ ನೀಡಲಾಗುವುದು. 7 ಲಕ್ಷ ಮೌಲ್ಯದ 10 ಸಾವಿರ ಐಸ್ ಕ್ರೀಂ ನೀಡುವ ಗುರಿ ಹೊಂದಲಾಗಿದೆ ಎಂದು ಅಕ್ಷಯ ದಾನಕಶಿರೂರ ತಿಳಿಸಿದರು.
ಇದೇ ಮೊದಲಲ್ಲ;
ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಿ ಬಂದವರು ಒಂದು ಐಸ್ ಕ್ರೀಮ್ ಖರೀದಿ ಮಾಡಿದರೆ, ಮತ್ತೊಂದು ಐಸ್ ಕ್ರೀಮ್ ಉಚಿತವಾಗಿ ನೀಡಿದ್ದಾರೆ. ಅಂದಾಜು 50 ಸಾವಿರ ಮೌಲ್ಯದ ಐಸ್ ಕ್ರೀಂ ಉಚಿತವಾಗಿ ನೀಡುವ ಮೂಲಕ ಮತದಾನ ಹೆಚ್ಚಳಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಸರ್ಕಾರಗಳು ಗುರುತಿಸಲಿ:
ಮತದಾನ ಹೆಚ್ಚಳಕ್ಕೆ ತಮ್ಮದೆಯಾದ ಕೊಡುಗೆ ನೀಡುತ್ತಿರುವ ವ್ಯಕ್ತಿಗಳನ್ನು ಸರ್ಕಾರಗಳು ಗುರುತಿಸಬೇಕಿದೆ. ತಾವು ಮತ ಹಾಕುವುದನ್ನೇ ಮರೆಯುತ್ತಿರುವವರ ಮಧ್ಯೆ ಪ್ರಜೆಗಳು ಮತದಾನ ಮಾಡಲು ಪ್ರೋತ್ಸಾಹ ನೀಡುತ್ತಿರುವವನ್ನು ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಗುರತಿಸುವ ಕೆಲಸವಾಗಬೇಕಿದೆ.